ಸಬ್ ಅರ್ಬನ್ ರೈಲ್ವೆಗೆ ಅನಂತಕುಮಾರ್ ಹೆಸರು: ಸೋಮಣ್ಣ

ಬೆಂಗಳೂರು, ಸೆ. ೨೧- ದಿ. ಅನಂತಕುಮಾರ್ ಅವರ ಕನಸಿನ ಕೂಸಾದ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಅವರ ಹೆಸರಿಡುವ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ವಿಧಾನಪರಿಷತ್‌ನಲ್ಲಿಂದು ಹೇಳಿದರು.
ತಾವು ಬಿಜೆಪಿಗೆ ಬರಲು ಅನಂತಕುಮಾರ್ ಅವರು ಕಾರಣ. ಜತೆಗೆ ಅವರ ಬಲಗೈ ಭಂಟ ಅಶೋಕ್ ಸೇರಿದಂತೆ ಇನ್ನಿತರ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಬ್ ಅರ್ಬನ್ ರೈಲು ಯೋಜನೆಗೆ ಅನಂತಕುಮಾರ್ ಹೆಸರಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೋಪಿನಾಥ್‌ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಕ್ರಿಯೆ ಕಾನೂನಾತ್ಮಕವಾಗಿಯೇ ಆಗಬೇಕು. ಇದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ ಎನ್ನುವ ವಿಶ್ವಾಸವೂ ಇದೆ ಎಂದು ಹೇಳಿದರು.
ಮೊದಲ ಹಂತದ ಟೆಂಡರ್
೧೪೮.೧೭ ಕಿ.ಮೀ. ಉದ್ದದ ಬೆಂಗಳೂರು ಸಬ್ ಅರ್ಬನ್ ಯೋಜನೆಯ ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದು, ಮೊದಲ ಹಂತದ ಯೋಜನೆಗೆ ಟೆಂಡರ್ ಕೈಗೆತ್ತಿಕೊಂಡು ಸಿವಿಲ್ ವರ್ಕ್ ೨೭ ತಿಂಗಳೊಳಗೆ ಪೂರ್ಣಗೊಳಿಸಲು ಸಮಯ ನೀಡಲಾಗಿದೆ ಎಂದರು.
ನಿಗದಿತ ೨೭ ತಿಂಗಳ ಅವಧಿಯಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡ ನಂತರ ೨ನೇ ಹಂತದ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಸದ್ಯ ಬೆಂಗಳೂರು-ದೇವನಹಳ್ಳಿ, ಬೈಯಪ್ಪನಹಳ್ಳಿ-ಚಿಕ್ಕಬಾಣಾವಾರ, ಕೆಂಗೇರಿ-ವೈಟ್‌ಫೀಲ್ಡ್, ಇಳಲಗಿ-ರಾಜನಕುಂಟೆ ಮಾರ್ಗದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಬೈಯಪ್ಪನಹಳ್ಳಿ-ಚಿಕ್ಕಬಾಣಾವಾರ ನಡುವಿನ ಸಿವಿಲ್ ಕಾಮಗಾರಿಯನ್ನು ೮೫೯ ಕೋಟಿ ರೂ. ವೆಚ್ಚದಲ್ಲಿ ೨೭ ತಿಂಗಳಲ್ಲಿ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಗಿದೆ. ಅದು ಮುಗಿದ ನಂತರ ಹಂತ ಹಂತವಾಗಿ ಇನ್ನುಳಿದ ಮಾರ್ಗಗಳ ಕಾಮಗಾರಿ ಕೈಗೆತ್ತಿಕೊಂಡು ನಗರದ ಜನರಿಗೆ ಸಬ್ ಅರ್ಬನ್ ರೈಲು ಯೋಜನೆ ಸೇವೆ ಕಲ್ಪಿಸಲಾಗುವುದು ಎಂದರು.
ಈ ಯೋಜನೆಯ ಆರಂಭದಿಂದ ಸುಮಾರು ೧೦ ಲಕ್ಷ ಜನರಿಗೆ ಪ್ರತಿನಿತ್ಯ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇದೆ. ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ. ೨೦:೨೦ ಮತ್ತು ಶೇ. ೬೦ ರಷ್ಟು ಸಾಲದ ರೂಪದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ಅವರು ಯೋಜನೆಯನ್ನು ಆರಂಭಿಸಲು ಮುಂದಾದಾಗ ೫ ಸಾವಿರ ಕೋಟಿ ಇತ್ತು. ಈಗ ೧೫ ಸಾವಿರ ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಇತ್ತೀಚೆಗೆ ಪ್ರಧಾನ ಮಂತ್ರಿಗಳು ಬೆಂಗಳೂರಿಗೆ ಬಂದು ಈ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಆದಷ್ಟು ಬೇಗ ಈ ಯೋಜನೆಯನ್ನು ಪೂರ್ಣಗೊಳಿಸಿ ನಗರದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.