ಕೋಲಾರ,ಜು.೨೮:ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು ಬ್ಯಾಂಕ್ ಗಳು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಅರ್ಹ ಪಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಜಿ.ಪಂ ಸಿಇಓ ಪದ್ಮ ಬಸವಂತಪ್ಪ ಹೇಳಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಡಿ.ಸಿ.ಸಿ ಮತ್ತು ಡಿ.ಎಲ್.ಆರ್.ಸಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬಡ ಮತ್ತು ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿವೆ. ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಯೋಜನೆಗಳ ಬಗ್ಗೆ ಪೂರ್ಣವಾಗಿ ಮಾಹಿತಿ ಹೊಂದುವುದು ಅನಿವಾರ್ಯ. ಹಾಗೆಯೇ ಯೋಜನೆಗಳ ಲಾಭವನ್ನು ಪಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದರು.
ಕೃಷಿ, ಶಿಕ್ಷಣಕ್ಕೆ ಹೆಚ್ಚಿನ ಸಾಲ ನೀಡುವ ಮೂಲಕ ರೈತರಿಗೆ ಮತ್ತು ವಿದ್ಯಾರ್ಥಿ ವರ್ಗಕ್ಕೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಪುಷದ್ಯಮಕ್ಕೆ ಹೆಸರು ವಾಸಿಯಾಗಿರುವುದರಿಂದ ಈ ಕ್ಷೇತ್ರಗಳತ್ತ ಬ್ಯಾಂಕ್ ಗಳು ಗಮನಹರಿಸಿ, ಹೆಚ್ಚಿನ ಸಾಲ ನೀಡಿದರೆ ಜಿಲ್ಲೆಯು ಆರ್ಥಿಕವಾಗಿ ಸದೃಢವಾಗಲಿದೆ ಎಂದು ತಿಳಿಸಿದರು.
ರಿಸರ್ವ್ ಬ್ಯಾಂಕ್ ಇಂಡಿಯಾದ ಪ್ರಾದೇಶಿಕ ಕೇಂದ್ರದ ಮ್ಯಾನೇಜರ್ ಜೀವಿಕಾ ಮಾತನಾಡಿ, ಗ್ರಾಹಕರ ಜೊತೆ ಉತ್ತಮ ಭಾಂದವ್ಯ ಹೊಂದುವ ಮೂಲಕ ಬ್ಯಾಂಕ್ ಗಳ ಬಗ್ಗೆ ವಿಶ್ವಾಸ ಬರುವ ರೀತಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುದೀರ್ ಮಾತನಾಡಿ, ಪ್ರಸ್ತಕ ಆರ್ಥಿಕ ವಷದಲ್ಲಿ ಕೃಷಿ, ತೋಟಗಾರಿಕೆ, ಸಣ್ಣ, ಮಧ್ಯಮ ಕೈಗಾರಿಕೆ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸಾಲ ನೀಡುವ ಬಗ್ಗೆ ಜಿಲ್ಲೆಯ ಬ್ಯಾಂಕ್ ಗಳಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಜನಸಾಮಾನ್ಯರು ಸರ್ಕಾರದ ಯೋಜನೆಗಳ ಮೂಲಕ ಸಹಾಯಧನ ಮತ್ತು ಸಾಲ ಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಜನಸಾಮಾನ್ಯರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಅಶೋಕ್ ಕುಮಾರ್ ಎಂ, ನಬಾರ್ಡ್ ಬ್ಯಾಂಕ್ ನ ಡಿಡಿಎಂ ಮನೋಜ್ ಕುಮಾರ್ ಎಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.