ಸಫಾಯಿ ಕರ್ಮಚಾರಿಗಳ ಪುನರ್ ಸಮೀಕ್ಷೆ ಹೆಚ್ಚಿನ ಅನುದಾನಕ್ಕೆ ಒತ್ತಾಯ:ಹನುಮಂತಪ್ಪ

ಬಳ್ಳಾರಿ, ಜ.08: ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳನ್ನು ಪುನರ್ ಸಮೀಕ್ಷೆ ಮಾಡಲು ನಿರ್ಧರಿಸಿದ್ದು ಆರಂಭಿಕವಾಗಿ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಯಿಂದ ಸದ್ಯದಲ್ಲೇ ಇದು ಆರಂಭಗೊಳ್ಳಲಿದೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಹೇಳಿದ್ದಾರೆ.
ಅವರಿಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಹಿಂದೆ 1996ರ ವೇಳೆ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿದ್ದವರನ್ನು ಮಾತ್ರ ಸಮೀಕ್ಷೆ ಮಾಡಲಾಗಿದ್ದು ಆ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 1.42 ಲಕ್ಷ ಸಫಾಯಿ ಕರ್ಮಚಾರಿಗಳಿದ್ದಾರೆ. ಈ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಅನುದಾನ ನೀಡಲು ನಿರ್ಧರಿಸಿತ್ತು. ಆದರೆ ಖಾಸಗಿ ಸರ್ಕಾರಿ, ಅರೆ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳನ್ನು ಈ ಹಿಂದಿನ ಸಮೀಕ್ಷೆ ಒಳಗೊಂಡಿರಲಿಲ್ಲ ಅದಕ್ಕಾಗಿ ಸಂಪೂರ್ಣ ಸಮೀಕ್ಷೆಗಾಗಿ ನಿರ್ಧರಿಸಿದ್ದು ಆರಂಭಿಕವಾಗಿ ಮೈಸೂರು ಮತ್ತು ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿ ಈ ತಿಂಗಳು ಸಮೀಕ್ಷೆ ಕಾರ್ಯ ಆರಂಭಗೊಳ್ಳಲಿದೆ. ಒಟ್ಟಾರೆ ಈ ವರ್ಷಾಂತ್ಯಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಿ ಅದರ ವರದಿ ಆಧಾರದ ಮೇಲೆ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಮುಂದಿನ ಆರ್ಥಿಕ ವರ್ಷದ ಯೋಜನೆ ರೂಪಿಸಲಿದೆಂದರು.
ಅನುದಾನ ಹೆಚ್ಚಳಕ್ಕೆ ಒತ್ತಾಯ
ಸಫಾಯಿ ಕರ್ಮಚಾರಿಗಳು ಚರಂಡಿ ಸ್ವಚ್ಛತೆ, ಉದ್ಯೋಗದಿಂದ ಮುಕ್ತರನ್ನಾಗಿ ವಿವಿಧ ಉದ್ಯೋಗದಲ್ಲಿ ತೊಡಗಿಸುವಂತೆ ಮಾಡಲು ನಿಗಮ ರಚನೆಯಾಯಿತು. ಅವರಿಗೆ ಸ್ವಉದ್ಯೋಗ ಕೈಗೊಳ್ಳಲು ಕಳೆದ ವರ್ಷ ಸರ್ಕಾರ 66 ಕೋಟಿ ರೂಗಳ ಅನುದಾನ ನೀಡಿದೆ. ಕೋವಿಡ್ ಕಾರಣದಿಂದ ಈ ವರೆಗೆ ವೆಚ್ಚ ಮಾಡಿಲ್ಲ, ಅದಕ್ಕಾಗಿ ಬರುವ ಫೆಬ್ರವರಿ ಒಳಗೆ ಈ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಸೂಚಿಸಿರುವುದಾಗಿ ತಿಳಿಸಿದರು.
ಕೊರತೆ
ಈ ಹಿಂದಿನ ನಾಲ್ಕು ವರ್ಷಗಳಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಕೇವಲ 28ಕೋಟಿ ರೂ ಅನುದಾನ ನೀಡಿತ್ತು, ನೀಡಿದ ಅನುದಾನದ ದುರ್ಬಳಕೆಯೂ ಆಗಿದ್ದು ತನಿಖೆ ನಡೆಯುತ್ತಿದೆ. ಅಲ್ಲದೆ ಯೋಜನೆಗಳ ಅನುಷ್ಠಾನಕ್ಕೆ ನಿಗಮದಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು ಅಗತ್ಯ ಸಿಬ್ಬಂದಿ ನೇಮಕಕ್ಕೆ ಕೋರಿದೆಂದರು.
ಸಭೆ
ರಾಜ್ಯದಲ್ಲಿ ಪೌರ ಕಾರ್ಮಿಕರು ಮತ್ತು ಒಳ ಚರಂಡಿ ಕಾರ್ಮಿಕರ ನಡುವೆ ತಾರತಮ್ಯ ಇದೆ. ಅದಕ್ಕಾಗಿ ಅದರ ನಿವಾರಣೆಗೆ ಸರ್ವೆ ಕಾರ್ಯ, ರಾಷ್ಟ್ರೀಯ ಕಾನೂನು ವಿವಿಯಿಂದ ನಡೆಯಲಿದೆ. ಹೊಸ ಸರ್ವೆ ವರದಿ ಬಂದರೆ ಸಫಾಯಿ ಕರ್ಮಚಾರಿಗಳ ಸಂಖ್ಯೆ ರಾಜ್ಯದಲ್ಲಿ 3 ಲಕ್ಷ ಇರಬಹುದು. ಈ ಸಂಖ್ಯೆಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂ ಅನುದಾನ ಮತ್ತು ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದಿಂದ 500 ಕೋಟಿ ರೂ ಅನುದಾನ ನೀಡುವಂತೆ ಒತ್ತಾಯಿಸಲಿದೆಂದರು.
ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ತಾವು ಜ.13ರಂದು ಸಭೆ ಕರೆದಿರುವುದಾಗಿ ತಿಳಿಸಿದರು.
ಸ್ವಂತ ಮನೆ
ಬಹುತೇಕ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಸ್ವಂತ ಮನೆಯಿಲ್ಲ, ಅವರಿಗೆ ಸ್ವಂತ ಸೂರು ಕಲ್ಪಿಸಲು ಉದ್ದೇಶಿಸಿದೆ. ಹೀಗಿರುವ ಅವರ ಅಭಿವೃದ್ಧಿ ಯೋಜನೆಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆಗಳು ಹೆಚ್ಚು ಸಮರ್ಪಕವಾಗಿಲ್ಲ, ನಗರ ಪ್ರದೇಶದಲ್ಲಿ ಇವುಗಳ ಅನುಷ್ಠಾನ ಆಗಲು ಸಾಧ್ಯವಿಲ್ಲ, ಅದಕ್ಕಾಗಿ ಸ್ವ ಉದ್ಯೋಗ ಕೈಗೊಳ್ಳುವ ಯೋಜನೆಗಳಿಗೆ ಆದ್ಯತೆ ನೀಡಲಿದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಇದ್ದರು.