ಸಪ್ಲೈ ಬಿಲ್ ಪಾವತಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.29: ನರೇಗಾ ಯೋಜನೆಯಡಿ ಅಭಿವೃದ್ದಿ ಕಾಮಗಾರಿ ಮಾಡಿದ ರೈತರ ಖಾತೆಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಸಾಮಗ್ರಿ ವೆಚ್ಚದ ಬಿಲ್ ಪಾವತಿಸದ ತಾಲೂಕು ಪಂಚಾಯತಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಕಾರ್ಯವೈಕರಿಯ ವಿರುದ್ದ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಕಾಮಗಾರಿಗಳ ಸಪ್ಲೆ ಬಿಲ್‍ಗೆ ಆಗ್ರಹಿಸಿ ಪಟ್ಟಣದ ತಾಲೂಕು ಪಂಚಾಯತಿ ಕಾರ್ಯಾಲಯದ ಮುಂದೆ ಇಂದಿನಿಂದ ಆಹೋರಾತ್ರಿ ಚಳುವಳಿ ಹಮ್ಮಿಕೊಳ್ಳಲು ತಾಲೂಕು ರೈತಸಂಘದ ನೇತೃತ್ವದಲ್ಲಿ ನೂರಾರು ರೈತರು ಇಂದು ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸಿದರು. ರೈತ ಚಳುವಳಿಯ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ರೈತರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಡೆಸಿದ ರೈತರಿಗೆ ಕಳೆದ ನಾಲ್ಕು ವರ್ಷಗಳಿಂದ ಇದುವರೆಗೂ ಒಂದೇ ಒಂದು ನಯಾಪೈಸೆ ಸಾಮಗ್ರಿ ವೆಚ್ಚದ ಬಿಲ್ ಪಾವತಿಯಾಗಿಲ್ಲ. ಇಲಾಖಾ ಮಾಹಿತಿಯಂತೆ ತೋಟಗಾರಿಕಾ ಇಲಾಖೆ ಮತ್ತು 34 ಗ್ರಾಮ ಪಂಚಾಯತಿಗಳಿಂದ 8.10 ಕೋಟಿ ಸಪ್ಲೆ ಬಿಲ್ ರೈತರಿಗೆ ಬರಬೇಕು. ನರೇಗಾ ಕೂಲಿ ಹಣವನ್ನು ಮಾತ್ರ ನೀಡಿರುವ ಅಧಿಕಾರಿಗಳು ಸಾಮಗ್ರಿ ಬಿಲ್ ನೀಡದೆ ರೈತರನ್ನು ವಂಚಿಸಿದ್ದಾರೆ.
ಅಧಿಕಾರಿಗಳ ಮಾತು ನಂಬಿ ನರೇಗಾ ಯೋಜನೆಯಡಿ ಅಭಿವೃದ್ದಿ ಕಾಮಗಾರಿ ಮಾಡಿದ ರೈತರು ಸಾಲಗಾರರಾಗಿದ್ದು ಸರ್ಕಾರವೇ ರೈತರನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂದು ಆಕ್ರೋಶ ಹೊರಹಾಕಿದರು. ಅಧಿಕಾರಿಗಳ ಕಾರ್ಯಲೋಪವೇ ರೈತರ ಸಾಲಗಾರರಾಗಲು ಕಾರಣ ಎಂದು ಕಿಡಿಕಾರಿದ ಎಂ.ವಿ.ರಾಜೇಗೌಡ ವಿದ್ಯಾವಂತ ಅಧಿಕಾರಿಗಳು ದೇಶ ಕಟ್ಟಬೇಕು. ಅದನ್ನು ಬಿಟ್ಟು ಮದ್ಯವರ್ತಿಗಳನ್ನು ಬಿಟ್ಟುಕೊಂಡು ರೈತರ ಶೋಷಣೆಗೆ ನಿಂತಿದ್ದೀರಿ. ಲಂಚ ಕೊಡದ ರೈತರ ಸಪ್ಲೆ ಬಿಲ್ ಮಂಜೂರಾತಿಗೆ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದೀರಿ. ಕೂಲಿ ಹಣ ನೀಡಲು ಇಲ್ಲದ ತಾಂತ್ರಿಕ ದೋಷಗಳು ಸಪ್ಲೆ ಬಿಲ್ ನೀಡುವಾಗ ಮಾತ್ರ ಕಾಣಿಸಿಕೊಳ್ಳುತ್ತಿದ್ದೆಯಾ? ಸಪ್ಲೆ ಬಿಲ್ ಹಣವನ್ನು ರೈತರ ಖಾತೆಗೆ ಜಮೆ ಮಾಡದಿದ್ದರೆ ನಾವು ಚುನಾವಣಾ ನೀತಿ ಸಂಹಿತೆಯನ್ನು ಲೆಕ್ಕಿಸದೆ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ ರೈತರ ಖಾತೆಗೆ ಹಣ ಹಾಕಲು ತಾಂತ್ರಿಕ ದೋಷಗಳ ಕಾರಣ ಹೇಳುತ್ತೀರಿ. ಒಂದೇ ಒಂದು ದಿನವೂ ತಾಂತ್ರಿಕ ದೋಷದ ಹೆಸರಿನಲ್ಲಿ ನಿಮಗೆ ಮಾಸಿಕ ಸಂಬಳ ನಿಂತ ಉದಾಹರಣೆಯೇ ಇಲ್ಲ. ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು ರೈತರ ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.
ಸಪ್ಲೆ ಬಿಲ್ ಹಣ ಬಾರದೆ ರೈತರು ತಾವು ಮಾಡಿದ ಸಾಲದ ಹಣಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ. ಆದ ಕಾರಣ ಬಡ್ಡಿ ಸೇರಿಸಿ ರೈತರಿಗೆ ಸಪ್ಲೆ ಬಿಲ್ ಹಣ ಹಾಕಿ ಮತ್ತು ಸಕಾಲಕ್ಕೆ ರೈತರ ಖಾತೆಗೆ ಹಣ ಹಾಕದ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ. ಸಪ್ಲೆ ಬಿಲ್ ಲೋಪದ ಬಗ್ಗೆ ಇಲಖೆಯ ವತಿಯಿಂದ ಸಮಗ್ರ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ರೈತರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಜಿಲ್ಲಾ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ ನಾನು ರೈತನ ಮಗಳು. ನಿಮ್ಮಂತೆ ಹಸಿರು ಟವಲ್ ಹಾಕಿ ಹೋರಾಟ ಮಾಡದಿದ್ದರೂ ರೈತ ಕುಲದ ಸೇವೆ ಮಾಡಲು ಎಂಜಿನಿಯರ್ ಆಗುವ ಬದಲು ತೋಟಗಾರಿಕಾ ಇಲಾಖೆಯ ಅಧಿಕಾರಿಯಾಗಿದ್ದೇನೆ. ನರೇಗಾ ಯೋಜನೆಯಡಿ ತಾಲೂಕಿನಲ್ಲಿ 1733 ರೈತರಿಗೆ ಸಪ್ಲೆ ಬಿಲ್ ಪಾವತಿಯಾಗಿರಲಿಲ್ಲ. ನನ್ನ ಗಮನಕ್ಕೆ ಬಂದು ಕೋಡಲೇ ಹಂತ ಹಂತವಾಗಿ ಎಲ್ಲಾ ಬಿಲ್ ಕ್ಲಿಯರ್ ಮಾಡುತ್ತಿದ್ದು ಈಗ 844 ರೈತರ ಬಿಲ್ ಪೆಂಡಿಗ್ ಇದೆ. ಮುಂದಿನ ಮೂರು ತಿಂಗಳ ಒಳಗಾಗಿ ತಾಲೂಕಿನ ರೈತರ ಯಾವುದೇ ಸಪ್ಲೆ ಬಿಲ್ ಬಾಕಿಯಿರದಂತೆ ಕ್ರಮ ವಹಿಸುತ್ತೇನೆ. ಸಪ್ಲೆ ಬಿಲ್ ವಿಳಂಭಕ್ಕೆ ಕಾರಣರಾದವರ ವಿರುದ್ದ ಇಲಾಖಾ ತನಿಖೆ ನಡೆಸಿ ಕ್ರಮ ವಹಿಸುತ್ತೇನೆ. ಕೋರಮಂಡಲ್ ಕಾರ್ಖಾನೆಯ ಹಾರು ಬೂದಿ ಸಮಸ್ಯೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಪರಿಶೀಲನೆಗೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡುವ ಮೂಲಕ ರೈತರ ಅಹೋರಾತ್ರಿ ಚಳುವಳಿಯನ್ನು ಮುಂದೂಡಿಸುವಲ್ಲಿ ಯಶಸ್ವಿಯಾದರು.