ಸಪ್ತ ಋಷಿ ಕಲ್ಪನೆಯ ಕೇಂದ್ರ ಬಜೆಟ್: ಎಸ್.ಎ.ರಾಮದಾಸ್

ಸಂಜೆವಾಣಿ ನ್ಯೂಸ್
ಮೈಸೂರು: ಜ.02:- ಕೇಂದ್ರ ಬಿಜೆಪಿ ಸರ್ಕಾರದ ಬಜೆಟ್ ಸಪ್ತ ಋಷಿ ಕಲ್ಪನೆಯ ಬಜೆಟ್ ಆಗಿದ್ದು, ಇದರಲ್ಲಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಲಾಭ ದೊರಕಿಸಲಾಗಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ನಡೆದಿರುವ ಯೋಜನೆಗಳ ಫಲಿತಾಂಶವನ್ನು ಜಜೆಟ್ ತೆರೆದಿಟ್ಟಿದೆ. ಇಂಕ್ಲೂಸಿವ್, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಒಬಿಸಿಯ 18 ವರ್ಗಗಳು, ರೀಚಿಂಗ್ ದಿ ಲಾಸ್ಟ್ ಮ್ಯಾನ್, ಯೂತ್ ಪವರ್, ಪರಿಸರ ಪೂರಕವಾದ ಗ್ರೀನ್ ಗ್ರೌತ್, ರೈಲ್ವೆ ವ್ಯವಸ್ಥೆಯ ಉನ್ನತೀಕರಣ ಸೇರಿ ಎಲ್ಲಾ ವಲಯಗಳ ಉತ್ತೇಜನದೊಂದಿಗೆ ಅಭಿವೃದ್ಧಿ ಹೊಂದಿದ ಭಾರತ ಕಲ್ಪನೆ ಇದಾಗಿದೆ ಎಂದರು.
ಈ ಬಜೆಟ್ ವಿರೋಧಿಸುವ ಕಾಂಗ್ರೆಸ್ ಅವಧಿಯಲ್ಲಿ ನೀಡಿದ ಸಾಲ ಎಷ್ಟು, ಮರುಪಾವತಿ ಎಷ್ಟು ಎಂದು ನಾವು ಕೇಳಬೇಕು. ಪಿ.ಎಂ. ಸ್ವನಿಧಿ ಯೋಜನೆಯನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ. ಯೋಜನೆಯಲ್ಲಿ ಸಾಲ ಪಡೆದವರಿಂದ ಶೇ 90ಕ್ಕೂ ಹೆಚ್ಚು ವಾಪಸ್ಸಾತಿಯಾಗಿದೆ. ಮಹಿಳೆಯರಿಗೆ ಲಕ್ ಪತಿ ಯೋಜನೆ ಹೆಚ್ಚಿನ ಸಾಲಕ್ಕೆ ಆದ್ಯತೆ ನೀಡಲಾಗಿದೆ. ಎಂ.ಎಂ.ಆರ್, ಐ.ಎಂ.ಆರ್ ಯೋಜನೆ ಹೆಚ್ಚಳ ಮಾಡಲಾಗಿದೆ ಎಂದರು.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಎನ್ ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಟಿಕೆಟ್ ನೀಡುವ ವೇಳೆ ಎಲ್ಲಾ ಅಂಶವನ್ನ ಪಕ್ಷ ಗಮನಿಸುತ್ತದೆ. ಗೆಲುವು ಒಂದೇ ಮಾನದಂಡ. ಮಾಧ್ಯಮಗಳಿಗೆ ಇರುವ ಮಾಹಿತಿ ಪ್ರಕಾರ ನೀವು ಚರ್ಚೆ ಮಾಡುತ್ತೀರಾ ಟಿಕೆಟ್ ನೀಡುವ ಕುರಿತು ಯಾವುದೇ ಸಭೆ ನಡೆದಿಲ್ಲ. ನಮ್ಮ ಬಳಿ ಯಾವುದೇ ಮಾಹಿತಿ ಕೇಳಿಲ್ಲ ಎಂದರು.
ಫೆಬ್ರವರಿ 5ರ ಬಳಿಕ ನಾಲ್ಕು ಕ್ಷೇತ್ರಗಳಿಗೂ ತೆರಳುತ್ತೇನೆ. ಕಾರ್ಯಕರ್ತರು, ಮುಖಂಡರು ನೀಡುವ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಿಳಿಸುತ್ತೇವೆ. ಟಿಕೆಟ್ ನೀಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಎಸ್ ಎ ರಾಮದಾಸ್ ತಿಳಿಸಿದರು.ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಅನಿವಾರ್ಯತೆ ಇದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಂಸದ ಡಿ ಕೆ ಸುರೇಶ್ ಕೂಡಲೇ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.
ಎಐಸಿಸಿ, ಕೆಪಿಸಿಸಿ ದುರ್ಬಲವಾಗಿವೆ. ಹಾಗಾಗಿ ಡಿ. ಕೆ ಸುರೇಶ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದೇ ಮಾತನ್ನು ರಾಹುಲ್ ಗಾಂಧಿಯವರಿಂದ ಹೇಳಿಸಲಿ. ಎಐಸಿಸಿ, ಕೆಪಿಸಿಸಿ ಕೂಡಲೇ ಸಂಸದ ಡಿ ಕೆ ಸುರೇಶ್ ವಿರುದ್ಧ ಕ್ರಮ ಜರುಗಿಸಬೇಕು. ಒಂದೆಡೆ ರಾಹುಲ್ ಗಾಂಧಿ ಯಾತ್ರೆ ಮೂಲಕ ಭಾರತ್ ಜೋಡೋ ಅಂತಾರೆ. ಮತ್ತೊಂದೆಡೆ ಅವರದೇ ಪಕ್ಷದ ಸಂಸದ ಭಾರತ ಇಬ್ಭಾಗದ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಕೂಡ ಚೀನಾಗೆ ಹೋದಾಗ ತಮ್ಮ ಸಂಸ್ಥೆಗೆ ಸಂಬಂಧಿಸಿದ ವಿಚಾರದಲ್ಲಿ ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಯಾರಿಗೂ ಗೊತ್ತಾಗದಂತೆ ವಿಮಾನದಿಂದ ಮತ್ತೊಂದು ವಿಮಾನಕ್ಕೆ ರಹಸ್ಯವಾಗಿ ತೆರಳಿ ಒಪ್ಪಂದಗಳಿಗೆ ರಾಹುಲ್ ಗಾಂಧಿ ಸಹಿ ಹಾಕಿದ್ದಾರೆ ಎಂದು ಹೇಳಿದರು. ಎ.ಎಲ್.ಸಂತೋಷ್, ಪ್ರಶಾಂತ್ ಬಾಬು ಇನ್ನಿತರರು ಉಪಸ್ಥಿತರಿದ್ದರು.