ಸಪ್ತಗಿರಿ ಕಾಲೇಜು: ಮೂವರಿಗೆ ಲಾಪ್‍ಟಾಪ್ ಕೊಡುಗೆ

ಬೀದರ್: ಜು.29:ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95ಕ್ಕೂ ಅಧಿಕ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲಾಪ್‍ಟಾಪ್ ಕೊಡುಗೆಯಾಗಿ ನೀಡಿ, ಪ್ರೋತ್ಸಾಹಿಸಿದೆ.

ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಅವರು ವಿದ್ಯಾರ್ಥಿಗಳಾದ ವಿಷ್ಣುವರ್ಧನ್ (ಶೇ 96.16), ಸುದೀಕ್ಷಿತ್ (ಶೇ 95.33) ಹಾಗೂ ಸ್ವರೂಪ್ (ಶೇ 95) ಅವರನ್ನು ಸನ್ಮಾನಿಸಿ, ಲಾಪ್‍ಟಾಪ್ ವಿತರಿಸಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಏನಾಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಬೇಕು. ಗುರಿ ಸಾಧನೆಗೆ ನಿರಂತರ ಪರಿಶ್ರಮ ಪಡಬೇಕು ಎಂದು ಅವರು ಹೇಳಿದರು.

ಮಂದಕನಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಚಂದ್ರಕಾಂತ ಗಂಗಶೆಟ್ಟಿ ಮಾತನಾಡಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಡಾ. ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂ ಬಡತನದ ಮಧ್ಯೆಯೇ ಜೀವನದಲ್ಲಿ ಅಮೋಘ ಸಾಧನೆ ಮಾಡಿದ್ದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಗೋವಿಂದ ತಾಂದಳೆ ಮಾತನಾಡಿ, ಪ್ರಸಕ್ತ ವರ್ಷ ಕಾಲೇಜಿಗೆ ಶೇ 98.41 ರಷ್ಟು ಫಲಿತಾಂಶ ಲಭಿಸಿದೆ. 22 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ 100 ಕ್ಕೆ 100 ರಷ್ಟು ಫಲಿತಾಂಶ ಕಾಲೇಜಿನ ಗುರಿಯಾಗಿದೆ ಎಂದು ಹೇಳಿದರು.

ಎಸ್.ವಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಡಿ. ತಾಂದಳೆ ಮಾತನಾಡಿದರು. ಜೀವಶಾಸ್ತ್ರ ಉಪನ್ಯಾಸಕ ಅನಿಲಕುಮಾರ ಜಾಧವ್ ನಿರೂಪಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.