ಸನ್ಮಾರ್ಗದಲ್ಲಿ ಸಾಗಿ ಸಾಧಿಸಿ ಜಯಿಸಿ: ಅಬುತುರಾಬ ಖಾದ್ರಿ

ವಾಡಿ:ಜ.19: ಮನುಷ್ಯನ ಸರಳ ಜೀವನಕ್ಕೆ ಧರ್ಮ ಎಂಬ ಬೇಲಿ ಅವಶ್ಯಕ ಧರ್ಮಗ್ರಂಥಗಳ ಪಠಣೆಯಿಂದ ಮತ್ತು ತಿಳಿದುಕೊಳ್ಳುವ ಮೂಲಕ ಸನ್ಮಾರ್ಗದಲ್ಲಿ ಸಾಗಿ ಸಾಧಿಸಿ ಜಯಿಸಬೇಕು ಎಂದು ಹಳಕರ್ಟಿ ದರ್ಗಾದ ಪೀಠಾಧಿಪತಿ ಸೈಯದ್ ಅಬುತುರಾಬ್ ಶಾಹ ಖ್ವಾದ್ರಿ ಹೇಳಿದರು.

ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಹಳಕರ್ಟಿ ಗ್ರಾಮದ ಆರಾಧ್ಯ ದೈವ ಲಿಂ.ಶ್ರೀಮುನೀಂದ್ರ ಶಿವಯೋಗಿಗಳ 40ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ, ಶ್ರೀಗುಡ್ಡಾಪುರ ದಾನಮ್ಮ ದೇವಿಯ ಮಹಾಪುರಾಣದ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು. ಶ್ರೀಮಠದ ಪೀಠಾಧಿಪತಿ ಅಭಿನವ ಶ್ರೀಮುನಿಂದ್ರ ಶ್ರೀಗಳು ಪ್ರತಿ ವರ್ಷ ಪುರಾಣ, ಪ್ರವಚನ ಆಯೋಜಿಸುವ ಮೂಲಕ ಭಕ್ತರ ಆತ್ಮಾವಿಶ್ವಾಸ ಗಳಿಸಿಕೊಂಡಿದ್ದಾರೆ. ಶ್ರೀಮಠವನ್ನು ಧಾರ್ಮಿಕವಾಗಿ ಹಾಗೂ ಸಾಂಸ್ಕøತಿಕವಾಗಿ ಭಾವೈಕ್ಯತೆ ಸಾರುತ್ತಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.

ಕಟ್ಟಿಮನಿ ಹಿರೇಮಠದ ಶ್ರೀಮುನೀಮಧ್ರ ಶಿವಾಚಾರ್ಯ, ಯರಗೋಳ ವಿರಕ್ತ ಮಠದ ಶ್ರೀಸಂಗಮೇಶ್ವರ ಸ್ವಾಮಿ ಪ್ರವಚನ ಸಮಾರಂಭದ ಸಾನಿಧ್ಯ ವಹಿಸಿದ್ದರು. ಅರಳಗುಂಡಿಗೆ ಶ್ರೀಚನ್ನವೀರ ಶಾಸ್ತ್ರೀಗಳು ಪ್ರವಚನ ಪ್ರಸ್ತುತ ಪಡಿಸಿದರು. ಸಿಂಧಗಿಯ ಯಶವಂತ ಬಡಿಗೇರ ಸಂಗೀತ ವಾಚನ ಮಾಡಿದರು. ಮುಖಂಡರಾದ ಶಿವು ಬಳವಡಗಿ, ಭೀಮರಾಯ ಛತ್ರಕಿ, ಟೋಪು ದೇವಾಪುರತಾಂಡಾ, ಅಂಬ್ರೀಶ್, ದೊಡ್ಡಪ್ಪ ಅಂಗಡಿ, ಶಿವಯೋಗಿ ಕರದಾಳ, ಬಸವರಾಜ ಸಾಹು ಜೀವಣಗಿ, ಮುನಿಯಪ್ಪ, ಸತ್ಯವಾನ ಬೋಸ್ಲೆ ಸೇರಿದಂತೆ ಅನೇಕರು ಇದ್ದರು. ಪುರಾಣ ಸಮಾರಂಭದಲ್ಲಿ ಸುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಪಾಲ್ಗೋಂಡಿದ್ದರು. ಶಿಕ್ಷಕ ಬಸವರಾಜ ಅವಂಟಿ ನಿರೂಪಿಸಿದರು.