ಸನ್ಮಾನ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ನವಲಗುಂದ,ಜ21 : ನೌಕರರೆಲ್ಲರೂ ಸೇವೆಯನ್ನು ಪ್ರೀತಿಯಿಂದ ಮಾಡಿ,ಬಡ ಜನರ ಕಲ್ಯಾಣಕ್ಕಾಗಿ ನೀವೆಲ್ಲರೂ ಸರ್ಕಾರದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮುತುವರ್ಜಿಯಿಂದ ಅವರಿಗೆ ತಲುಪಿಸುವ ಕೆಲಸ ಅಚ್ಚುಕಟ್ಟಾಗಿ ಮಾಡಬೇಕು..ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ ನನ್ನದು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು

ಅವರು ಪಟ್ಟಣದ ಸರಕಾರಿ ಶಾಲೆ ನಂ 4 ರ ಆವರಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕಾ ಘಟಕ ಹಾಗೂ ನೌಕರರ ವಿವಿಧ ಸಂಘಗಳ ವತಿಯಿಂದ ನೌಕರರ ಪ್ರಮುಖ ಬೇಡಿಕೆಯಾದ 7 ನೇ ವೇತನ ಆಯೋಗದ ವರದಿ ಜಾರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿ ಮಾತನಾಡಿದ ಅವರು 7ನೇ ವೇತನ ವಿಚಾರ ಈಗಾಗಲೇ ಮುಖ್ಯಮಂತ್ರಿಗಳ ಗಮನದಲ್ಲಿದೆ.ಇದರ ಬಗೆಗೆ ಸರ್ಕಾರ ಸಕಾರಾತ್ಮಕ ಚಿಂತನೆ ಹೊಂದಿದೆ. ಸಿದ್ದರಾಮಯ್ಯನವರು ನೌಕರರ ಮುಖಂಡರನ್ನು ಕರೆದು ಚರ್ಚಿಸಿದ್ದಾರೆ ನಾನು ಕೂಡಾ ಈ ದಿನವೇ ನಿಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ತಮ್ಮ ಬೇಡಿಕೆ ಈಡೇರಿಕೆಗೆ ವಿನಂತಿಸುವೆ ಎಂದರು.

ಇದಕ್ಕೂ ಮೊದಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕಾ ಅಧ್ಯಕ್ಷ ಎ ಬಿ ಕೊಪ್ಪದ ಮಾತನಾಡಿ ನೌಕರರ ಬಹು ದಿನಗಳ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು. ಆಯೋಗದ ವರದಿ ಕೂಡಲೇ ಪಡೆದುಕೊಂಡು ಜಾರಿಗೊಳಿಸಬೇಕು, ಹೊಸ ಪಿಂಚಣಿ ಯೋಜನೆ ನೌಕರರನ್ನು ಹೈರಾಣಾಗಿಸಿದೆ ಇದನ್ನು ರದ್ದು ಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿದರೆ ನೌಕರರ ಬಾಂದವರು ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮನ್ನು ಸ್ಮರಿಸುವರು. ಇನ್ನೂ ನಗದು ರಹಿತ ಚಿಕಿತ್ಸೆಗಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆ ಮನವಿ ಮೂಲಕ ವಿನಂತಿಸಿದರು

ಡಿ.ಜಿ.ಹುಲ್ಲೂರ, ಸಹದೇವ ಪೂಜಾರ, ಬಿ.ಎಂ.ಪಾಟೀಲ, ಎಸ್.ಕೆ.ಕುರಹಟ್ಟಿ, ಎಸ್ ಎಚ್ ಹರಕುಣಿ, ಗಣೇಶ ಹೊಳೆಯಣ್ಣವರ, ಬಸವರಾಜ ಜಾಧವ್, ಬಿ.ಎಂ.ಹುಡೇದ, ಮಲ್ಲಿಕಾರ್ಜುನ ವಗ್ಗರ, ಸುಜಾತಾ ದೊಡಮನಿ, ವಿರೇಶ ಗುಡದೂರಮಠ, ನಾಗರಾಜ್ ಕರಿಸಕ್ರಣ್ಣವರ. ಯಶಿವಂತಿ ನರಸಪ್ಪನವರ, ಎ ಎಂ ಮುಲ್ಲಾ, ಸುಜಾತಾ ದೊಡಮನಿ ಹಾಗೂ ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ 300 ಕ್ಕೂ ಹೆಚ್ಚು ನೌಕರರು ಇದ್ದರು…