ಸನ್ಮಾನದಿಂದ ಸಾಧನೆಗೆ ಪ್ರೇರಣೆ-ದೇಸಾಯಿ

ಧಾರವಾಡ,ಏ5: ಇಲ್ಲಿನ ಹೊಸಾಯಲ್ಲಾಪುರ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶಿಕ್ಷಣ ಸಮಿತಿ ಲಿಂಗಾಯತ ನೇಕಾರ ಸಮಾಜದ ವತಿಯಿಂದ ವಿಶೇಷ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿ ಶುಭಾಶಯಗಳು ಕೋರಲಾಯಿತು.
ಈ ಸಂದರ್ಭದಲ್ಲಿ ಸಮಾಜದ ವತಿಯಿಂದ ಶಾಸಕರು ಅಮೃತ ದೇಸಾಯಿ ಹಾಗು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರು ಈರೇಶ ಅಂಚಟಗೇರಿ ಹಾಗು ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಅಮೃತ ದೇಸಾಯಿ ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಸನ್ಮಾನಿಸುವುದರಿಂದ ಅವರಲ್ಲಿ ಸಾಧನೆಗೈಯುವ ಶಕ್ತಿ ಬೆಳೆದು ಸಮಾಜದಲ್ಲಿ ಇನ್ನು ಪ್ರಖರವಾಗಿ ಬೆಳೆಯುವ ಅವಕಾಶ ನೀಡಿದಂತಾಗುವದು.ಇಂತಹ ಕಾರ್ಯಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಜರುಗಿ ಮಕ್ಕಳನ್ನು ಸ್ಪರ್ಧಾತ್ಮಕವಾಗಿ ಸಶಕ್ತರನ್ನಾಗಿ ಮಾಡಲು ದಾರಿಯಾಗುತ್ತದೆ ಎಂದು ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆಗಳು ತಿಳಿಸಿದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರು ಈರೇಶ ಅಂಚಟಗೇರಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಯುವ ಪ್ರತಿಭೆಗಳು ಪ್ರಜ್ವಲಿಸಿ ಮುಂದಿನ ಭಾರತದ ಭದ್ರ ಬುನಾದಿಗೆ ನಾಂದಿಯಾಗುವವರು.ಅಂತವರನ್ನ ಸನ್ಮಾನಿಸಿ ಅಭಿನಂದಿಸುವದು ಶ್ಲಾಘನೀಯ ಕಾರ್ಯ ಹಾಗು ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಗಳು ಪ್ರತಿ ಸಮಾಜದಿಂದ ಜರುಗುವದರಿಂದ ಸಾಮಾಜಿಕ ಸಾಮರಸ್ಯ ಬೆಳೆಯುವುದು ಎಂದರು.
ಈ ಸಂದರ್ಭದಲ್ಲಿ ಡಾ. ಮಹಾದೇವ ಚಟ್ಟಿ, ಎಮ್. ಸಿ. ಹೆಗಡಿ, ಬಸವರಾಜ ವಿಭೂತಿ, ಸರ್ವಮಂಗಳ ಕಂಗೂರಿ, ಐ. ಎಚ. ಕಡ್ಲಿಮಟ್ಟಿ, ಬಿ. ಎಸ್. ಖಣದಾಳಿ, ಎಮ್. ಎಸ್ ದೇವಗಿರಿ, ಎಸ್. ಜಿ. ಹಳಕಟ್ಟಿ ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.