ಸನ್ನತಿ-ಕನಗನಳ್ಳಿ ಬೌದ್ಧ ಸ್ತೂಪ ಅಭಿವೃದ್ದಿಗೆ 3.54 ಕೋಟಿ ಬಿಡುಗಡೆ

ಚಿತ್ತಾಪುರ: ಜು.20:ತಾಲೂಕಿನ ಸನ್ನತಿ-ಕನಗನಳ್ಳಿ ಪ್ರದೇಶದಲ್ಲಿರುವ ಬೌದ್ಧ ಸ್ತೂಪದ ಸ್ಥಳವನ್ನು ಸಂರಕ್ಷಣೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು 3.54 ಕೋಟಿ ಬಿಡುಗಡೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ ಎಂದು ಕಲಬುರಗಿ ಲೋಕಸಭೆ ಸದಸ್ಯ ಡಾ.ಉಮೇಶ ಜಾಧವ ತಿಳಿಸಿದ್ದಾರೆ.

ಸನ್ನತಿ-ಕನಗನಳ್ಳಿಯ ಬೌದ್ಧ ಸ್ತೂಪದ ಅಭಿವೃದ್ದಿಗೆ ಇಚೇಗೆ ನಾನು ಗುದ್ದಲಿ ಪೂಜೆ ನೆರವೇರಿಸಿದ್ದೆ. ಇದನ್ನು ಸಹಿಸಲಾರದ ಶಾಸಕ ಪ್ರಿಯಾಂಕ್ ಖರ್ಗೆ ವಾಡಿ ಕಾರ್ಯಕ್ರಮವೊಂದರಲ್ಲಿ ಅನುದಾನವೇ ಬಂದಿಲ್ಲ ಯಾರಿಗೆ ಮಾಹಿತಿ ನೀಡದೇ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ನನ್ನ ವಿರುದ್ದ ಟೀಕೆ ಮಾಡಿದ್ದರು. ನಾನು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಅನುದಾನ ತಂದಿದ್ದೇನೆ ಅದರಂತೆ ಅಭಿವೃದ್ದಿಗೆ ಚಾಲನೆ ನೀಡಿದ್ದೇನೆ, ಹೀಗಾಗಿ ಶಾಸಕ ಪ್ರಿಯಾಂಕ್ ಖರ್ಗೆ ಬರೀ ಟೀಕೆ ಟಿಪ್ಪಣೆ ಮಾಡುವುನ್ನು ಬಿಟ್ಟು ಅಭಿವೃದ್ದಿ ಕಾರ್ಯಕ್ಕೆ ಸಹಕರಿಸಲಿ ಎಂದು ಕಿವಿಮಾತು ಹೇಳಿದರು.

ಬೌದ್ಧ ಸ್ತೂಪದ ಸಂರಕ್ಷಣೆ ಕಾರ್ಯಕ್ಕೆ ಹಂಪಿ ವೃತ್ತದ ಪುರಾತತ್ವ ಅಧೀಕ್ಷರನ್ನೊಳಗೊಂಡ ಅಧಿಕಾರಿಗಳ ತಂಡವು ಕೈಗೆತ್ತಿಕೊಂಡಿತ್ತು. ಎಎಸ್‍ಐ ಮಹಾನಿರ್ದೇಶಕಿ ವಿ.ವಿದ್ಯಾವತಿ ಸೋಮವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ ಇದಕ್ಕೆ ಸಂಸಧ ಡಾ.ಉಮೇಶ ಜಾಧವ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಸನ್ನತಿ-ಕನಗನಳ್ಳಿ ಗ್ರಾಮಗಳ ಬೌದ್ಧ ಸ್ತೂಪ ಇರುವ ಪ್ರದೇಶ ಅಭಿವೃದ್ದಿ ಮಾಡಲು ಕೇಂದ್ರ ಸರಕಾರ ಬದ್ದವಾಗಿದೆ ಈಗಾಗಲೇ ಸಂರಕ್ಷಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಸಂಸ್ಕøತಿ, ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ದಿ ಸಚಿವ ಜಿ.ಕಿಶನ್ ರೆಡ್ಡಿ ತಿಳಿಸಿದ್ದಾರೆ.

ಸೋಮವಾರ ಆರಂಭವಾದ ಸಂಸತ್ ಅಧಿವೇಶನದಲ್ಲಿ ಸಂಸದ ಡಾ.ಉಮೇಶ ಜಾಧವ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವ ಕಿಶನರೆಡ್ಡಿ, ಕನಗನಳ್ಳಿಯಲ್ಲಿರುವ ಬೌದ್ಧ ಸ್ತೂಪವು ಸಾಂಚಿನ ಸ್ತೂಪದ ಕಾಲಮಾನವನ್ನು ಹೊಂದಿದ್ದು ಮೌರ್ಯ ರಾಜಮನೆತನದ ಸಾಮ್ರಾಟ ಅಶೋಕನ ಏಕೈಕ ಮೂರ್ತಿ ದೊರೆತ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖವಾಗಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳು ಬೆನಗುತ್ತಿ, ಹಸರಗುಂಡಗಿ, ಕನಗನಳ್ಳಿ ಹಾಗೂ ರಣಮಂಡಲದಲ್ಲಿ ದೊರೆತಿವೆ, ಐತಿಹಾಸಿಕ ಮಹತ್ವನ್ನು ಹೊಂದಿದ ಈ ಸ್ಥಳವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‍ಐ) ಈಗಾಗಲೇ ಸಂರಕ್ಷಣೆಗೆ ಮುಂದಾಗಿದೆ ಎಂದಿದ್ದಾರೆ.

ಕನಗನಳ್ಳಿಯಲ್ಲಿಯ ಸ್ತೂಪವನ್ನು ಮರು ಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ ಇಲ್ಲಿ ಸಿಕ್ಕ ಸ್ತೂಪ, ವಿವಿಧ ಪ್ರತಿಮೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಬೌದ್ಧ ಸ್ತೂಪ, ಆಯಕ ಕಂಬಗಳು, ವಿವಿಧ ಬುದ್ಧನ ಮೂರ್ತಿಗಳು, ಬಣ್ಣದ ಕಲ್ಲಿನಿಂದ ಕಟೆದ ರೇಲಿಂಗ್ಸ್ಗಳು ಇಲ್ಲಿ ದೊರೆತಿವೆ ಎಂದು ಸಚಿವರು ತಿಳಿಸಿದ್ದಾರೆ.


ಸನ್ನತಿ-ಕನಗನಳ್ಳಿಯ ಬೌದ್ಧ ಸ್ತೂಪದ ಅಭಿವೃದ್ದಿ ಕಡೆ ಇಲ್ಲಿವರೆಗೆ ಹಿಂದಿನ ಸರಕಾರಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಗಮನ ಹರಿಸಿರಲಿಲ್ಲ ಆದರೆ ಈಗ ಸಂಸಧ ಡಾ.ಉಮೇಶ ಜಾಧವ ಅವರು ಮುತುವರ್ಜಿ ವಹಿಸಿ ಸಂಸತ್‍ನಲ್ಲಿ ಈ ಕುರಿತು ಚರ್ಚೆ ಮಾಡಿ ಸರಕಾರದ ಮೇಲೆ ಮತ್ತು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರಿದ ಪರಿಣಾಮ ಇಂದು 3.50 ಕೋಟಿ ಅನುದಾನ ಬಿಡುಗಡೆಯಾಗಿದೆ, ಹೀಗಾಗಿ ಸಂಸಧರ ಕಾರ್ಯ ಎಲ್ಲರು ಮೆಚ್ಚುವಂತದ್ದು. ಹಾಗೂ ಟೀಕೆ ಮಾಡುವವರಿಗೆ ಉತ್ತರ ಕೊಟ್ಟಂತಾಗಿದೆ.

-ಬಸವರಾಜ ಬೆಣ್ಣೂರಕರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು.