ಸನ್ನಡತೆಯೇ ನಿಜವಾದ ಸಂಪತ್ತು

ಬೀದರ್:ಜ.11: ಸನ್ನಡತೆಯೇ ಮನುಷ್ಯನ ನಿಜವಾದ ಸಂಪತ್ತು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.

ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 10ನೇ ಸಿದ್ಧರಾಮೇಶ್ವರ ನಮ್ಮೂರ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಸ್ತಿ, ಅಂತಸ್ತು, ಅಧಿಕಾರಗಳು ಶಾಶ್ವತ ಅಲ್ಲ ಎಂದು ನುಡಿದರು.

ಜೀವನದ ಸಾರ್ಥಕತೆಗಾಗಿ ಮನುಷ್ಯ ಉತ್ತಮ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.

ನೇತೃತ್ವ ವಹಿಸಿದ್ದ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿ, ಮನುಷ್ಯನ ನಡೆ-ನುಡಿ ಒಂದೇ ಆಗಿರಬೇಕು ಎಂದು ಹೇಳಿದರು.

ಮಾತಿನ ಮಹತ್ವ ಬಹಳ ಇದೆ. ಆದ್ದರಿಂದಲೇ ಶರಣರು ಮಾತನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದ್ದಾರೆ. ಕಾರಣ, ಮಾತುಗಳನ್ನು ಪ್ರಜ್ಞಾಪೂರ್ವಕವಾಗಿ ಆಡಬೇಕು. ಮಾತುಗಳು ಎದುರಿನವರ ಮನಸ್ಸು ಅರಳಿಸುವಂತಿರಬೇಕು. ಬೇಸರ, ದುಃಖ ದೂರ ಮಾಡುವಂತಿರಬೇಕು. ಯಾವ ಕಾರಣಕ್ಕೂ ಬೇರೆಯವರ ಮನಸ್ಸಿಗೆ ನೋವು ಉಂಟು ಮಾಡುವಂತೆ ಇರಬಾರದು ಎಂದು ತಿಳಿಸಿದರು.