ಸನಾತನ ಸಂಸ್ಕøತಿ ರಕ್ಷಿಸಿದವರು ಜಗದ್ಗುರು ರೇಣುಕಾಚಾರ್ಯರು: ಈಶ್ವರಸಿಂಗ್ ಠಾಕೂರ್

ಬೀದರ್: ಮಾ.6:ಜಾಗತಿಕ ಇತಿಹಾಸದಲ್ಲಿ ಸನಾತನ ಧರ್ಮ ಹಾಗೂ ಸಂಸ್ಕøತಿಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಇದು ಭಾರತೀಯ ಬದುಕಿನ ರಕ್ಷಾ ಕವಚವಾಗಿ ನಿಂತಿದ್ದು, ಅದನ್ನು ಪ್ರತಿಪಾದಿಸಿ, ರಕ್ಷಿಸಿದವರು ಜಗದಾದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದು ಬಿಜೆಪಿ ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ತಿಳಿಸಿದರು.

ಭಾನುವಾರ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಪಂಚಾಚಾರ್ಯ ಪುಣ್ಯಾಶ್ರಮದಲ್ಲಿನ ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ ಜಗದ್ಗುರು ರೇಣುಕರ ಪ್ರತಿಮೆಗೆ ಪೂಜೆಗೈದು, ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಆದಿ ಗುರು ಶಂಕರಾಚಾರ್ಯರಿಗೆ ಚಂದ್ರಮೌಳೇಶ್ವರ ಮೂರ್ತಿ ನೀಡಿ ಪೂಜಿಸುವಂತೆ ಸೂಚಿಸಿದವರು ಜಗದ್ಗುರು ರೇನುಕಾಚಾರ್ಯರು. ಸುಮಾರು 18 ಸಮುದಾಯಗಳಿಗೆ ಆರಾಧ್ಯ ದೈವರಾಗಿ ರೇಣುಕಾಚಾರ್ಯರು ಗುರ್ತಿಸಿದ್ದಾರೆ. ದಲಿತರ ಆದಿಯಾಗಿ ಹಿಂದುಳಿದ ವರ್ಗಗಳ ಮನೆ ದೇವರಾಗಿಯು ರೇವಣಸಿದ್ದೇಶ್ವರ ರೂಪದಲ್ಲಿ ಕಂಡು ಬಂದಿರುವರು ಎಂದು ವಿವರಿಸಿದರು.

ಹೆಡಗಾಪುರ ಶಿವಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಷ.ಬ್ರ ಶಿವಲಿಂಗೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಕುಮಾರ ಸ್ವಾಮಿ ಹಿರೇಮಠ, ಅಖಿಲ ಭಾರತೀಯ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ, ಪುಣ್ಯಾಶ್ರಮದ ಸದ್ಭಕ್ತರಾದ ನಿರಂಜನ ಸ್ವಾಮಿ, ಶಿವಶರಣಪ್ಪ ಪಾಟೀಲ, ಮಲ್ಲಿಕಾರ್ಜುನ್ ಚಿಕಪೇಟೆ, ಪತ್ರಕರ್ತ ಶಿವಶರಣಪ್ಪ ವಾಲಿ, ಡಾ.ರಜನೀಶ ವಾಲಿ, ಸಿದ್ರಾಮಯ್ಯ ಸ್ವಾಮಿ ಹಾಗೂ ಹಲವರು ಕಾರ್ಯಕ್ರಮದಲ್ಲಿದ್ದರು.

ಆರಂಭದಲ್ಲಿ ಬಸವರಾಜ ಸ್ವಾಮಿ ಚಿಟ್ಟಾ ಅವರು ರುದ್ರಾಭಿಷಕ ನಡೆಸಿಕೊಟ್ಟರು. ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಯೂ ಆದ ಪತ್ರಕರ್ತ ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ಕೋಶಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪೂರ ಕಾರ್ಯಕ್ರಮ ನಿರೂಪಿಸಿದರು. ಪಂಚಾಚಾರ್ಯ ಏಜ್ಯುಕೇಶನ್ ಆ್ಯಂಡ್ ರೂರಲ್ ಡೆವಲಪಮೆಂಟ್ ಸೂಸೈಟಿ ಅಧ್ಯಕ್ಷ ಕಾರ್ತಿಕ ಸ್ವಾಮಿ ಮಠಪತಿ ವಂದಿಸಿದರು. ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.