ಸನಾತನ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆಗೆ ಮಹತ್ವದ ಸ್ಥಾನ

ಅರಸೀಕೆರೆ, ಜು. ೧೫- ಭಾರತದ ಸನಾತನ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆಗೆ ಮಹತ್ವ ಸ್ಥಾನ ನೀಡಲಾಗಿದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಸುಕ್ಷೇತ್ರ ಕೋಡಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಗುರು ಎಂದರೆ ಜ್ಞಾನ ಬೋಧಿಸುವವರು, ಶಿಷ್ಯ ಎಂದರೆ ಅದನ್ನು ಕೇಳುವವನು ಸುಜ್ಞಾನವನ್ನು ಕೇಳಬೇಕು, ಅರಿತುಕೊಳ್ಳಬೇಕು. ಅಂತಹ ಮನುಷ್ಯನ ಬದುಕು ಸುಖಕರವಾಗಿರುತ್ತದೆ ಎಂದರು.
ಇಂದಿನ ಜೀವನದಲ್ಲಿ ಅಜ್ಞಾನ ಎಂಬುದು ತಾಂಡವವಾಡುತ್ತಿದೆ. ಜ್ಞಾನ ಎಂಬುದು ಕ್ಷೀಣಿಸುತ್ತಿದ್ದು, ಅಂಧಕಾರದಲ್ಲಿ ಮುಳುಗಿದೆ. ಮನುಷ್ಯನ ಜೀವನದಲ್ಲಿ ಸುಖ-ದುಃಖಗಳು ಇಲ್ಲದೆ ಅಶಾಂತಿಯಿಂದ ಕೂಡಿದೆ. ಆದ್ದರಿಂದ ಸತ್ಯವನ್ನು ತೋರಿಸುವಂತವವನು ನಿಜವಾದ ಗುರು. ಅದನ್ನು ಪಾಲನೆ ಮಾಡುವವನೇ ಶಿಷ್ಯ ಎಂದು ಹೇಳಿದರು.
ಪ್ರಕೃತಿಯಿಂದ ಮಾನವ ಕಲಿಯಬೇಕಾದದ್ದು ಬಹಳಷ್ಟು ಇವೆ. ಪ್ರಕೃತಿಯೆ ದೇವರು. ಪ್ರಕೃತಿಯೇ ಗುರು. ಪ್ರಕೃತಿಯನ್ನು ಆರಾಧಿಸಬೇಕು. ಆಗ ನಿಜವಾದ ಜ್ಞಾನ ದೊರೆಯುತ್ತದೆ. ಗುರು-ಶಿಷ್ಯ ಪರಂಪರೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಿಂದೆ ಗುರುವಿನ ಸಲಹೆ ಪಡೆದು ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಪಡೆದು ಬಾಳುತ್ತಿದ್ದರು. ಈಗ ಮಾನವನಿಗೆ ಅನೇಕ ಆಸೆಗಳಿಂದ ಜ್ಞಾನವಿಲ್ಲದೆ ಅಜ್ಞಾನದಿಂದ ಸತ್ಯದ ಹುಡುಕಾಟ ತೊಳಲಾಟಗಳಲ್ಲಿ ಸಿಲುಕಿ ನರಳುತ್ತಿದ್ದಾನೆ ಎಂದರು.