ಸನಾತನ ಪರಂಪರೆ ಮುಂದುವರೆಸಿರುವ ಮಠಗಳು

ಕೊರಟಗೆರೆ, ಮಾ. ೪- ಮಠಗಳು ಸನಾತನ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದ್ದು ಹಸಿದವರಿಗೆ ಅನ್ನ, ನೆಲೆ ಇಲ್ಲದವರಿಗೆ ಆಶ್ರಯ, ಬಡ ಮಕ್ಕಳಿಗೆ ವಿದ್ಯೆ ನೀಡುತ್ತಾ ಬರುತ್ತಿವೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತಾಲ್ಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮದ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗ ಸಂಸ್ಥಾನ ಮಠದ ನೂತನ ಸಮುದಾಯ ಭವನದ ದಾಸೋಹ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣದಲ್ಲಿ ಮಹತ್ತರ ಸಾಧನೆ ಮಾಡಿದೆ. ಇದರಲ್ಲಿ ನಮ್ಮ ಸಿದ್ದಗಂಗಾಮಠ, ಆದಿಚುಂಚನಗಿರಿ, ಸುತ್ತೂರು ಮಠಗಳಂತಹ ನೂರಾರು ಮಠಗಳ ಕೊಡಿಗೆ ಸಾಕಷ್ಟು ಇದೆ. ನಮ್ಮ ಕ್ಷೇತ್ರದ ಎಲೆರಾಂಪುರ ಗ್ರಾಮದ ಕುಂಚಿಟಿಗ ಮಹಾ ಸಂಸ್ಥಾನ ಮಠವು ಕೆಲವೆ ವರ್ಷಗಳಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಸಾಧನೆ ಮಾಡಿದ್ದು, ಇದ್ದಕ್ಕೆ ಈ ಮಠದ ಜವಾಬ್ದಾರಿ ಹೊತ್ತಿರುವ ಡಾ.ಶ್ರೀ ಹನುಮಂತನಾಥ ಸ್ವಾಮೀಜಿಗಳ ಪರಿಶ್ರಮ, ಸೇವೆ ಕಾರಣವಾಗಿದ್ದು ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಈ ಮಠಕ್ಕೆ ನನಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಲು ಬದ್ದ ಎಂದರು.
ನನ್ನ ಕುಟುಂಬ ಪರಿವಾರಕ್ಕೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ನಿರಂತರ ನಂಟು ಸದಾ ಇತ್ತು. ಅದೇ ರೀತಿಯಾಗಿ ಇಂದಿನ ನಿರ್ಮಲಾನಂದ ಸ್ವಾಮೀಜಿಗಳ ಅಶೀರ್ವಾದ ನಮ್ಮ ಮೇಲೆ ಸದಾ ಇದ್ದು ಅವರಲ್ಲಿ ನಂಬಿಕೆ ಇಟ್ಟಿದ್ದೇವೆ. ಇವರುಗಳ ಪೀಠಾಧ್ಯಕ್ಷತೆಯಲ್ಲಿ ಆದಿಚುಂಚನಗಿರಿ ಸಂಸ್ಥಾನವು ಲಕ್ಷಾಂತರ ಜನರಿಗೆ, ವಿದ್ಯಾರ್ಥಿಗಳಿಗೆ ಆಶ್ರಯವಾಗಿದೆ ಎಂದರು.
ತಾಲ್ಲೂಕಿನ ನರಸಿಂಹಗಿರಿ ಕ್ಷೇತ್ರದ ಹನುಮಂತನಾಥ ಸ್ವಾಮಿಜಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಡಾ.ಜಿ.ಪರಮೇಶ್ವರ್ ರವರಂತ ಜನಪ್ರತಿನಿಧಿಗಳ ಅತ್ಯಗತ್ಯವಿದೆ. ಕ್ಷೇತ್ತದಲ್ಲಿ ಪ್ರತಿ ಗ್ರಾಮಗಳಲ್ಲಿಯೂ ಒಂದೊಂದು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಐದು ವರ್ಷಗಳಲ್ಲಿ ಜನರೊಂದಿಗೆ ನಿರಂತರ ಒಡನಾಟ ಹೊಂದಿರುವ ಕೆಲವೇ ಜನಪ್ರತಿನಿಧಿಗಳಲ್ಲಿ ಡಾ.ಜಿ.ಪರಮೇಶ್ವರ್ ಒಬ್ಬರಾಗಿದ್ದಾರೆ. ನನಗೆ ಶಿಕ್ಷಣ ಮತ್ತು ಧರ್ಮ ಬೋಧನೆ ಮಾಡಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ತುಮಕೂರಿಗೆ ಬಂದರೆ ಡಾ.ಜಿ.ಪರಮೇಶ್ವರ್ ತಂದೆ ಗಂಗಾಧರಯ್ಯ ಮತ್ತು ಕೆಂಪಯ್ಯ ನವರ ಮನೆಗೆ ಬೇಟಿ ನೀಡಿ ಕುಶಲ ವಿಚಾರಿಸಿ ಮುಂದೆ ಹೋಗುತ್ತಿದ್ದರು. ಡಾ.ಜಿ.ಪರಮೇಶ್ವರ್ ಕೂಡಾ ನಮ್ಮ ನರಸಿಂಹಗಿರಿ ಕ್ಷೇತ್ರದ ಮಠಕ್ಕೆ ಸದ್ಭಕ್ತರಾಗಿದ್ದು, ನಾನು ಪತ್ರ ನೀಡಿ ಕಳುಹಿಸಿದ್ದ ಅನೇಕ ಬಡ ವಿದ್ಯಾರ್ಥಿಗಳಿಗೆ ಅವರ ಕಾಲೇಜುಗಳಲ್ಲಿ ಶುಲ್ಕ ವಿನಾಯತಿ, ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಡವರಿಗೆ ಉಚಿತ ಅಥವಾ ಶುಲ್ಕ ವಿನಾಯತಿ ಹಾಗೂ ಕೆಲವರಿಗೆ ಕೆಲಸ ಕೂಡಾ ನೀಡಿದ್ದು ಇದು ಅವರು ಮಠದ ಮೇಲೆ ಇಟ್ಟ ಗೌರವರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೌಶಲ್ಯಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ, ಜಿ.ಪಂ. ಮಾಜಿ ಸದಸ್ಯ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವತ್ಥ್‌ನಾರಾಯಣ, ಮಹಿಳಾ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಕವಿತಾ, ಮುಖಂಡರುಗಳಾದ ಸಿಗೇಪಾಳ್ಯ ಮಲ್ಲಪ್ಪ, ವೀರಣ್ಣ, ಸ್ವಾಮಿ, ರಾಜಶೇಖರ್, ಚನ್ನಲಿಂಗಪ್ಪ, ಸಿದ್ದಪ್ಪ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.