
ಕಲಬುರಗಿ,ಸೆ 12: ಸನಾತನ ಧರ್ಮ ಕುರಿತಂತೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರ ನಿಲುವುಗಳಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಬಲಿಸುತ್ತದೆ ಎಂದು ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗಿ ರೋಗಕ್ಕೆ ಹೋಲಿಸಿದ್ದು ತಪ್ಪೇನೂ ಇಲ್ಲ. ಬಹುಸಂಖ್ಯಾತರನ್ನು ಅಸಮಾನತೆಯ ಕೂಪಕ್ಕೆ ನೂಕುವ ಮನಸ್ಥಿತಿ ಸನಾತನ ಧರ್ಮ. ಜಾತಿ, ಅಸ್ಪೃಶ್ಯತೆ, ದೇಗುಲ ಪ್ರವೇಶ ನಿರಾಕರಣೆ, ಶೂದ್ರ, ದಲಿತರೊಂದಿಗೆ ಸಹ ಜೀವನ, ವೈವಾಹಿಕ ಸಂಬಂಧ ಒಪ್ಪದ, ಧರ್ಮದ ಹೆಸರಿನಲ್ಲಿ ಸುಲಿಗೆ, ದರೋಡೆ, ಹೋಮ- ಹವನ, ಯಾಗ-ಯಜ್ಞಗಳ ಹೆಸರಿನಲ್ಲಿ ಹಣ ಮಾಡುವ ಪುರೋಹಿತಶಾಹಿ ವ್ಯವಸ್ಥೆ ಸದಾ ಜಾರಿಯಲ್ಲಿರಬೇಕೆಂಬುದು ಸನಾತನವಾದಿಗಳ ಹುನ್ನಾರವಾಗಿದೆ ಎಂದು ಟೀಕಿಸಿದರು.
ಸಚಿವ ಉದಯನಿಧಿ ಸ್ಟಾಲಿನ್ ಅವರ ಮಾತುಗಳು ಶತಮಾನಗಳ ಹಿಂದೆ ಬುದ್ಧ, ಬಸವ, ಅಂಬೇಡ್ಕರ್,ಮಹಾವೀರ, ಕನಕದಾಸ, ಸಂತಕಬೀರ್, ನಾರಾಯಣಗುರು, ಸಂತ ತುಕಾರಾಮ, ನಾಲ್ವಡಿ ಕೃಷ್ಣರಾಜ ಒಡೆಯರ್, ಶಾಹು ಮಹಾರಾಜ್, ಕುವೆಂಪು ಅವರೆಲ್ಲರೂ ಹೇಳಿದ ಮಾತುಗಳನ್ನೇ ಸ್ಟಾಲಿನ್ ಹೇಳಿದ್ದಾರೆ. ಸ್ಟಾಲಿನ್ ತಲೆ ಕಡಿದು ತಂದು ಕೊಟ್ಟವರಿಗೆ ರೂ.10 ಕೋಟಿ ನೀಡುತ್ತೇನೆ ಎಂಬ ಘೋಷಣೆ, ನಾಲಿಗೆ ಕತ್ತರಿಸುವ ಬೆದರಿಕೆ, ಜೀವಂತ ಸುಡುತ್ತೇನೆ ಎಂಬ ಬೆದರಿಕೆಯ ಹೇಳಿಕೆಗಳು ಕೂಡಲೇ ನಿಲ್ಲಬೇಕು. ಒಂದು ವೇಳೆ ಮುಂದುವರೆದರೆ ದೇಶದ ಬಹುಸಂಖ್ಯಾತರು ಒಂದಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ರಾಜಕುಮಾರ ನಿಂಬಾಳ, ಸೂರ್ಯಕಾಂತ ಅಜಾದಪುರ, ಶಿವಕುಮಾರ ಕೊರಳ್ಳಿ, ಕಪಿಲ್ ಸಿಂಗೆ, ಮಹೇಶ್ ಸೇರಿದಂತೆ ಇತರರಿದ್ದರು.