ಸನಾತನ ಧರ್ಮ ಗೌರವಿಸುವೆ

ಕೋಲ್ಕತ್ತಾ,ಸೆ.೫- ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡಿರುವ ನಡುವೆಯೇ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಸನಾತನ ಧರ್ಮ ಗೌರವಿಸುವುದಾಗಿ ಹೇಳಿದ್ದಾರೆ.
ಈ ಮೂಲಕ ಸನಾತನ ಧರ್ಮದ ಕುರಿತು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ದೂರ ಇರುವ ಸ್ಪಷ್ಟ ಸಂದೇಶ ರವಾನಿಸಿದ್ಧಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಭಾವನೆಗಳಿವೆ. ಭಾರತದ ಮೂಲ ’ವೈವಿಧ್ಯತೆಯಲ್ಲಿ ಏಕತೆ’ಯಾಗಿದೆ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ ಹೇಳಿಕೆ ವಯಕ್ತಿಕವಾದದ್ದು ಎಂದು ತಿಳಿಸಿದ್ದಾರೆ.
ಒಂದು ವರ್ಗದ ಜನರಿಗೆ ನೋವುಂಟು ಮಾಡುವ ಯಾವುದೇ ವಿಷಯದಲ್ಲಿ ಯಾರೂ ಕೂಡ ಭಾಗಿಯಾಗಬಾರದು ಎಂದು ಮನವಿ ಮಾಡಿದ ಅವರು ಸ್ಟಾಲಿನ್ ಹೆಸರನ್ನು ಹೇಳದೆ ಮಮತಾ ಅವರು ಇತರ ಧರ್ಮಗಳ ಬಗ್ಗೆ ಪ್ರತಿಕ್ರಿಯಿಸದಂತೆ ಎಲ್ಲರಿಗೂ ವಿನಂತಿಸಿದ್ದಾರೆ.
ಡಿಎಂಕೆ ವಿರೋಧ ಪಕ್ಷದ ಬಣ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿರುವ ಕಾರಣ, ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿವಾದದ ದಿಕ್ಕನ್ನು ಪ್ರತಿಪಕ್ಷಗಳು ಹಿಂದೂ ವಿರೋಧಿ ಎಂದು ನಿರೂಪಿಸುವ ಕಡೆಗೆ ತಿರುಗಿಸಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತಬ್ಯಾಂಕ್ ರಾಜಕಾರಣಕ್ಕಾಗಿ ಪ್ರತಿಪಕ್ಷಗಳು ಸನಾತನ ಧರ್ಮವನ್ನು ಅವಮಾನಿಸುತ್ತಿವೆ ಎಂದು ಆರೋಪಿಸಿದ್ದಾರೆ
ಇಂಡಿಯಾ ಮೈತ್ರಿಕೂಟ ಮತಬ್ಯಾಂಕ್ ಮತ್ತು ತುಷ್ಟೀಕರಣದ ರಾಜಕೀಯಕ್ಕಾಗಿ ‘ಸನಾತನ ಧರ್ಮ’ವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
‘ಸನಾತನ ಧರ್ಮ’ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.