ಸನಾತನ ಧರ್ಮದ ಬೆಳವಣಿಗೆಗೆ ಇಸ್ಕಾನ್ ಯೋಗದಾನ ಮಹತ್ವದ್ದು

ಬೀದರ:ಸೆ.9:ಮಾನವ ಜನ್ಮ ಭಾಗ್ಯದಿಂದ ದೊರೆಯುತ್ತದೆ. ಅದರಲ್ಲೂ ಭಗವದ್ಭಕ್ತರ ಸಂಗ, ಸಂತರ ಸಂಗ ದೊರೆಯುವುದು ದುರ್ಲಭವಾಗಿದೆ. ಇಸ್ಕಾನ್ ಸಂಸ್ಥೆ ಮಾನವ ಜನ್ಮದ ಅರಿವು ಮೂಡಿಸಿ, ಭಗವದ್ಭಕ್ತರ, ಸಂತರಸಂಗ ನಿರಂತರ ದೊರೆಸುವ ಕಾರ್ಯ ವಿಶ್ವದಾದ್ಯಂತ ಅವ್ಯಾಹತವಾಗಿ ಮಾಡುತ್ತಿದೆ. ಮನುಷ್ಯನನ್ನು ಒಳ್ಳೆಯ ಸೇವಾಕಾರ್ಯಗಳಲ್ಲಿ ತೊಡಗಿಸಿ, ಅವನ ಜೀವನ ಉದ್ಧರಿಸುವ ಕಾರ್ಯ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ದೇವನಿಗಾಗಿ ತನು ತುಡಿಯುವಂತೆ ಮಾಡುವುದು, ಭಗವದ್ಭಕ್ತಿಯಲ್ಲಿ ಮನ ಲೀನವಾಗುವಂತೆ ಮಾಡುವುದು ಇದರ ಉದ್ಧೇಶವಾಗಿದೆ. ಇಡೀ ಮಾನವಕಲ್ಯಾಣ, ಜೀವಕಲ್ಯಾಣದ ಆಶಯ ಹೊಂದಿದ ಇಸ್ಕಾನ್‍ಸಂಸ್ಥೆ ಎಲ್ಲಾ ಕಡೆ ಪ್ರತಿಷ್ಠಾಪನೆಗೊಳ್ಳಬೇಕಾಗಿದೆ. ಏಕೆಂದರೆ ದುಷ್ಟಶಕ್ತಿಗಳ ನಿಗ್ರಹ ಹಾಗೂ ಶಿಷ್ಟಶಕ್ತಿಗಳ ಪ್ರಭಾವದ ಆಶಯ ಹೊತ್ತು ಅವತರಣವಾದ ಶ್ರೀಕೃಷ್ಣ ಮತ್ತು ಅವನ ಭಗವದ್ಗೀತೆ ಎಲ್ಲಾ ಕಡೆ ತುರ್ತಾಗಿ ತಲುಪಿಸುವ ಕಾರ್ಯಗೈಯಬೇಕಾಗಿದೆ. ಇಸ್ಕಾನ್‍ಸಂಸ್ಥೆ ವಿಶ್ವದಲ್ಲಿ ಭಾರತದ ಸನಾತನಸಂಸ್ಕøತಿ ಬೆಳೆಸುತ್ತಿದೆ. ಇದರ ಬೆಳವಣಿಗೆ ಹಿಂದೆ ಭಾರತದ ಬೆಳವಣಿಗೆಯೂ ಅಡಗಿದೆ. ಹಾಗಾಗಿ ಒಳ್ಳೆಯವರಾಗಬೇಕು, ಒಳ್ಳೆಕಾರ್ಯ ಮಾಡಬೇಕು ಎಂಬ ಆಶಯ ಹೊತ್ತವರು ಇಸ್ಕಾನ್ ಜೊತೆ ಕೈಗೂಡಿಸಬೇಕೆಂದು ಪಂಢರಪೂರದ ಇಸ್ಕಾನ್ ಪ್ರಮುಖರಾದ ಶ್ರವಣಭಕ್ತದಾಸರು ಹೇಳಿದರು. ಅವರು ಬೀದರನ ಚಿಕಪೇಟ ಹತ್ತಿರದ ಇಸ್ಕಾನ್ ನೀಲಾಚನ ಧಾಮದಲ್ಲಿ ಜರುಗಿದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಕೃಷ್ಣಕಥಾಮೃತದ ಮೇಲೆ ವಿಶೇಷ ಉಪನ್ಯಾಸವಿತ್ತು ಹೇಳಿದರು.

    ಮುಂದುವರೆದು ಶ್ರೀಕೃಷ್ಣನ ಜೀವನ ಸಂಘರ್ಷಮಯವಾಗಿದೆ. ಅಧರ್ಮದ ಮೇಲೆ ಧರ್ಮದ ವಿಜಯ ಪ್ರತಿಷ್ಠಾಪಿಸುವುದಾಗಿದೆ. ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ಆತ ಗೈದ ಲೀಲೆಗಳು ಚೇತೋಹಾರಿಗಳಾಗಿವೆ. ಅದರಲ್ಲೂ ಮೋಹಪಾಶದಲ್ಲಿ ಬಿದ್ದು, ಧರ್ಮಕರ್ತವ್ಯದಿಂದ ವಿಮುಖನಾಗುತ್ತಿದ್ದ ಅರ್ಜುನನಿಗೆ ಭಗವದ್ಗೀತೆ ಭೋದಿಸಿ, ಆತ ಕರ್ತವ್ಯದಲ್ಲಿ ತತ್ಪರನಾಗುವಂತೆ ಮಾಡಿ, ಆತನ ಮೂಲಕ ಮಹಾಭಾರತದಲ್ಲಿ ಧರ್ಮಸ್ಥಾಪನೆಯ ಕಾರ್ಯ ಮಾಡಿಸಿದುದು ಪ್ರೇರಣಾದಾಯಕವಾಗಿದೆ. ಶ್ರೀಕೃಷ್ಣನು ಭಕ್ತಿಯಲ್ಲಿಲೀನನಾದವರ ಹೃದಯದಲ್ಲಿ ಸದಾ ವಾಸವಾಗಿರುತ್ತಾನೆ. ಮತ್ತು ಅವರ ಯೋಗಕ್ಷೇಮ ಆತ ನೋಡಿಕೊಳ್ಳುತ್ತಾನೆ. ಇದು ಶೃತಿಸಿದ್ಧ ಮಾತಾಗಿದೆ. ಬ್ರಹ್ಮಾಂಡಗಳ ಒಡೆಯನಾದ ದೇವರ ಸರಿಸಮಾನರು ಮತ್ತು ದೇವರಿಗಿಂತ ದೊಡ್ಡವರು ಯಾರೂ ಇಲ್ಲ. ತಾನು ದೇವರ ಸರಿಸಮಾನನಾಗಿದ್ದೇನೆ ಎಂದು ಹೇಳಿ ದೇವರ ನಕಲು ಮಾಡಿ ಪೋಜು ಕೊಡುವವರು ನಕಲಿ ದೇವರಾಗಿದ್ದಾರೆ. ಇಂಥಹವರ ಮಾಯಾ ಮೋಸದಿಂದ ಎಚ್ಚರವಾಗಿರಬೇಕೆಂದು ಹೇಳಿದರು.
   ಇಸ್ಕಾನ್‍ನಲ್ಲಿರುವ ಎಂ.ಟೆಕ್, ಪಿಹೆಚ್.ಡಿಯಂತಹ ಪದವೀಧರರೂ ಹಾಗೂ ಉನ್ನತ ಹುದ್ದೆಯಲ್ಲಿರುವವರು ಕೂಡ ತಾವು ದೇವರ ದಾಸಾನುದಾಸರಾಗಿದ್ದೇವೆಂದು ಹೇಳಿ, ಇಲ್ಲಿನ ಸೇವಾ ಕಾರ್ಯಗಳಲ್ಲಿ ವಿನೀತರಾಗಿ ನಿರತರಾಗುತ್ತಾರೆ. ದೇವರು ದುಡ್ಡಿಗೆ ಒಲಿಯುವುದಿಲ್ಲ. ಆತ ಒಳ್ಳೆ ಭಾವಕ್ಕೆ, ಒಳ್ಳೆ ಸೇವೆಗೆ ಒಲಿಯುತ್ತಾನೆ ಹಾಗಾಗಿ ದೇವನೊಲುಮೆಗೆ ನಿಷ್ಕಾಮಕರ್ಮಿಯಾಗಿ ಜಪ, ತಪ ಧ್ಯಾನಗೈಯಬೇಕೆಂದಿರುವರು.

 ಭಗವದ್ಗೀತೆಯಲ್ಲಿ ಸಂಸಾರದಲ್ಲಿರುವವರೆಲ್ಲ ದೇವರ ಅಂಶಜರೇ ಆಗಿದ್ದಾರೆ. ಹಾಗಾಗಿ ಇಲ್ಲಿ ಭೇದ ಭಾವ ಸಲ್ಲದು ಎಂದು ಹೇಳಲಾಗಿದೆ. ದೇವರನ್ನು ಹೊರತುಪಡಿಸಿ ನೋಡುವುದು ಅಜ್ಞಾನದ ಪ್ರತೀಕವಾಗಿದೆ. ನಾವು ದೇವರಿಂದ ಬಂದಿದ್ದೇವೆ ಹಾಗಾಗಿ ನಮ್ಮ ಮೂಲ ಸ್ವಭಾವ ದೇವರೆಡೆ ಹೋಗುವುದಾಗಿದೆ. ದೇವರ ಕಥೆ ಕೇಳುವುದರಿಂದ ನಮ್ಮಲ್ಲಿ ಒಳ್ಳೆಯ ಭಾವಗಳು ಬರುತ್ತವೆ. ರುಕ್ಮಿಣಿ ಬಾಲ್ಯದಲ್ಲಿ ದೇವರ ಕಥೆ ಕೇಳುವುದು, ಸಾಧು ಸಂತರ ಕಾಲಿಗೆರಗುವುದು ಮತ್ತು ಸದಾ ಕೃಷ್ಣನ ಧ್ಯಾನದಲ್ಲಿ ಪರವಶವಾಗಿ ಇರುವುದು ಮಾಡುತ್ತಿದ್ದುದರಿಂದಲೇ, ಶ್ರೀಕೃಷ್ಣ ಆತ ಇದ್ದಲ್ಲಿಯೇ ರಥ ತೆಗೆದುಕೊಂಡು ಹೋಗಿ ಆಕೆಗೆ ತನ್ನ ಧಾಮಕ್ಕೆ ಕರೆದುಕೊಂಡುಬಂದ. ಕೃಷ್ಣನೊಲುಮೆಗೆ ಅಂತಹ ಭಾವ ನಮ್ಮದಾಗಬೇಕೆಂದರು.
   ಕೃಷ್ಣನ ಬಗ್ಗೆ ಪ್ರೇಮ ಮೂಡಬೇಕಾದರೆ, ಚೈತನ್ಯ ಮಹಾಪ್ರಭುಗಳ ಪಂಚತತ್ವ ಪಾಲಿಸಬೇಕೆಂದರು. ಹಿಂದಿನ ಕಾಲದಲ್ಲಿ ಮನೆಯ ಬಾಗಿಲಿಗೆ ಶುಭ-ಲಾಭ ಎಂದು ಬರೆಸುತ್ತಿದ್ದರು. ಆದರೆ ಈಗ 'ನಾಯಿಗಳಿವೆ ಎಚ್ಚರಿಕೆ' ಎಂದು ಬರೆಸುತ್ತಿದ್ದಾರೆ. ಇದೆಲ್ಲಾ ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವವಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಿಂದ ಭಾರತ ಸನಾತನ ಸಂಸ್ಕøತಿಯ ದರ್ಶನವಾಗುತ್ತದೆ. ಇಲ್ಲಿ ಕೃಷ್ಣಭಜನೆ, ನೃತ್ಯ, ಭಗವದ್ಭಕ್ತರು ಭಾವಪರವಶವಾಗಿ ಗೈಯುತ್ತಾರೆ. ಆರತಿ, ಅಭಿಷೇಕ, ತೊಟ್ಟಿಲು ಮತ್ತಿತರ ಕಾರ್ಯಕ್ರಮಗಳು ಸನಾತನ ಸಂಸ್ಕøತಿಯ ವೈಭವ ಸಾರುತ್ತವೆ.
 ಕಲಿಯುಗದಲ್ಲಿ ದೇವರನ್ನು ಆತನ ನಾಮಸ್ಮರಣೆ ಮೂಲಕ ಸರಳವಾಗಿ ಒಲಿಸಿಕೊಳ್ಳಬಹುದಾಗಿದೆ. ಇಸ್ಕಾನ್ ಬೆಳೆಯುತ್ತಿರುವುದರ ಹಿಂದೆ ಪ್ರಭುಪಾದರು ಹಾಕಿಕೊಟ್ಟ ನಾಮಸಂಕೀರ್ತನೆಯ ಪ್ರಭಾವವೇ ಬಹಳಷ್ಟಿದೆ. ಶ್ರೀಕೃಷ್ಣನು ತನಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಆತನು ಬೇರೆಯವರ  ಉದ್ಧರಿಸುವದಕ್ಕೋಸ್ಕರವೇ ಕಾರ್ಯ ಮಾಡಿದ್ದಾನೆ ಎಂದರು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀಶೈಲೇಂದ್ರ ಬೆಲ್ದಾಳೆಯವರು ಮಾತನಾಡುತ್ತ, ಬೀದರ ಇಸ್ಕಾನ್ ಸಂಸ್ಥೆಯ ಕಾರ್ಯಗಳು ಬೀದರನಲ್ಲಿ ಸನಾತನ ಸಂಸ್ಕøತಿ ಹಾಗೂ ಆಸ್ತಿಕ ಭಾವ ಪುನರುಜ್ಜೀವನಗೊಳಿಸುತ್ತಿವೆ. ಸನಾತನ ಸಂಸ್ಕøತಿ ಉಳಿದರೆ ವಿಶ್ವದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆಯೆಂದು ಆಶಿಸಬಹುದಾಗಿದೆ. ಸನಾತನ ಸಂಸ್ಕøತಿ ಜೀವಪರವಾದ ದೇವಪರವಾದ ಸಂಸ್ಕøತಿಯಾಗಿದೆ. ಇಲ್ಲಿ ಕೇಡಿಗೆ ಆಸ್ಪದವಿಲ್ಲ. ಮನುಷ್ಯನಲ್ಲಿ ವೈರಭಾವ ತೊಡೆದು ಪ್ರೇಮಭಾವ ಇದು ಮೂಡಿಸುತ್ತದೆ. ಚಂಚಲ ಮನಸ್ಸು ನಿಶ್ಚಲಗೊಳಿಸುತ್ತದೆ. ಇಲ್ಲಿನ ವಿಶಾಲತೆ, ಕ್ಷಮಾಗುಣ ದೊಡ್ಡದಿದೆ. ಭಾರತ ವಿಶ್ವಗುರುವಾಗಬೇಕಾದರೆ ನಾವೆಲ್ಲಾ ಸನಾತನ ಧರ್ಮ ಅಪ್ಪಿಕೊಳ್ಳಬೇಕಾಗಿದೆ. ಚಂದ್ರಯಾನ ಮೂರು ಭಾರತದ ಶಕ್ತಿ, ಜ್ಞಾನದ ಪ್ರತೀಕವಾಗಿದೆ. ಎಲ್ಲರಲ್ಲೂ ದೇವರನ್ನು ಕಾಣುವ ಭಾವ ಸನಾತನ ಧರ್ಮದಲ್ಲಿದೆ. ಇತಿಹಾಸದಲ್ಲಿ ದುಷ್ಟ ಶಕ್ತಿಗಳು ರಾಜ್ಯಾಡಳಿತದಲ್ಲಿದ್ದಾಗ ಇಲ್ಲಿನ ಸನಾತನ ಧರ್ಮ ಹಾಳಾಗಿದೆ. ಸ್ವದೇಶಿ ಶಿಕ್ಷಣ ಪದ್ಧತಿ ಹೋಗಿ ವಿದೇಶಿ ಶಿಕ್ಷಣ ಪದ್ಧತಿ ಪ್ರತಿಷ್ಠಾಪಿಸಲಾಗಿದೆ. ಭಾರತದಲ್ಲಿನ ಪಠ್ಯಗಳಲ್ಲಿ ಭಾರತದ ಸಂಸ್ಕøತಿ ತುಳಿದವರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಭಾರತ ಸಂಸ್ಕøತಿ ಎತ್ತರಿಸಿದವರಿಗೆ ತಿರಸ್ಕರಿಸಿ ಅನ್ಯಾಯವೆಸಗಲಾಗಿದೆ. ಹಾಗಾಗಿ ಭಾರತದ ಪಠ್ಯಗಳಲ್ಲಿ ಗುರುಕುಲಪದ್ಧತಿ, ಆಶ್ರಮ ಪದ್ಧತಿ ಶಿಕ್ಷಣ ಅಳವಡಿಸಬೇಕಾಗಿದೆ ಎಂದರು. ವಿಶ್ವದಲ್ಲಿ ಈಗ ಅಸಂತುಷ್ಟತೆ ಹಾಗೂ ಅಹಂಭಾವತೆ ಬೆಳೆಯುತ್ತಿರುವುದರಿಂದ ಮೂರನೇ ಮಹಾಯುದ್ಧದತ್ತ ನಮ್ಮನ್ನು ಕೊಂಡೊಯ್ಯುತ್ತಿದೆ. ಶತೃತ್ವಭಾವ ಹೋಗಲಾಡಿಸಿ ಮಿತೃತ್ವ ಭಾವ ತರಿಸುವ ಸನಾತನ ಧರ್ಮದ ಜಾಗೃತಿ ಈಗ ಅತ್ಯಾವಶ್ಯವಾಗಿದೆ ಎಂದರು. ಬೀದರ ಇಸ್ಕಾನ್ ಸಂಸ್ಥೆಯ ಯೋಜನೆಗಳಿಗೆ ನನ್ನ ಸಹಕಾರ, ಸಹಯೋಗ ಸದಾ ಇರುತ್ತದೆ. ಶಾಸಕರ ಅನುದಾನದಲ್ಲಿ 20 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದರು. 

ಕಾರ್ಯಕ್ರಮದಲ್ಲಿ ಅಭಿಷೇಕ, ತೊಟ್ಟಿಲು, ಭಜನೆ, ನೃತ್ಯ ಇನ್ನಿತರ ಕಾರ್ಯಕ್ರಮಗಳು ಜರುಗಿದವು.       ಕಾರ್ಯಕ್ರಮದಲ್ಲಿ ರಾಜಕುಮಾರ ಅಳ್ಳೆ, ಶಿವರಾಮ ಜೋಷಿ. ಡಾ.ನೀಲೇಶ ದೇಶಮುಖ, ರಾಮಕೃಷ್ಣನ್ ಸಾಳೆ, ಅನೀಲ ಪಾಂಡೆ, ಹಂಸಕವಿ, ವೀರಶೆಟ್ಟಿ ಮಣಗೆ, ಗಿರೀಶ ಕುಲಕರ್ಣಿ ಮತ್ತಿತರಿದ್ದರು.