
ಕಲಬುರಗಿ: ಸೆ.08 : ಸನಾತನ ಧರ್ಮದ ಸರ್ವನಾಶಕ್ಕೆ ಕರೆಕೊಟ್ಟು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ತಮಿಳ್ನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರ ಪ್ರತಿಕೃತಿಯನ್ನು ಪೋಲಿಸರ ವಿರೋಧದ ಮಧ್ಯೆಯೂ ಸುಟ್ಟುಹಾಕಿ ಪ್ರತಿಭಟಿಸಿದರು.
ನಗರದ ಸೂಪರ್ ಮಾರ್ಕೆಟ್ ವೃತ್ತದಲ್ಲಿ ಬೆಳಿಗ್ಗೆ ಹಿಂದೂ ಕಾರ್ಯಕರ್ತರು ಸೇರಿ ಸಚಿವ ಉದಯನಿಧಿ ಸ್ಟಾಲಿನ್ ಅವರ ಅವಹೇಳನಕ್ಕೆ ವಿರೋಧಿ ಘೋಷಣೆಗಳನ್ನು ಹಾಕಿದರು. ಅಷ್ಟೇ ಅಲ್ಲದೇ ಅವರ ಪ್ರತಿಕೃತಿಗೆ ಮೊದಲು ಪ್ರತಿಭಟನೆಕಾರರು ಒದ್ದು, ನಂತರ ಬೆಂಕಿ ಹಚ್ಚಲು ಯತ್ನಿಸಿದಾಗ ಪೋಲಿಸರು ಮಧ್ಯ ಪ್ರವೇಶಿಸಿ ಪ್ರತಿಕೃತಿಯನ್ನು ತೆಗೆದುಕೊಂಡು ಹೋದರು.
ಇದರಿಂದ ಕುಪಿತರಾದ ಪ್ರತಿಭಟನೆಕಾರರು ಸ್ಥಳದಲ್ಲಿಯೇ ಧರಣಿಯನ್ನು ಆರಂಭಿಸಿದರು. ಆಗ ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ ಅವರು ಮಾತನಾಡಿ, ಸನಾತನ ಹಿಂದೂ ಧರ್ಮದ ಕುರಿತು ನೀಡಿದ ಹೇಳಿಕೆಯನ್ನು ಉದಯನಿಧಿ ಸ್ಟಾಲಿನ್ ಹಿಂದಕ್ಕೆ ಪಡೆದು ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಸನಾತನ ಧರ್ಮಕ್ಕೆ ಅವಹೇಳನ ಮಾಡಿದ್ದರಿಂದ ಸಚಿವ ಉದಯನಿಧಿ ಸ್ಟಾಲಿನ್ ಅವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸುತ್ತೇವೆ ಎಂದು ಮೊದಲೇ ಚೌಕ್ ಪೋಲಿಸ್ ಠಾಣೆಗೆ ಅರ್ಜಿಯನ್ನು ಕೊಟ್ಟಿದ್ದೆವು. ಅದನ್ನು ಸ್ವೀಕರಿಸಿ ಅನುಮತಿ ಕೊಟ್ಟಿದ್ದರು. ಆದಾಗ್ಯೂ, ಪೋಲಿಸರು ತಾವೇ ಅನುಮತಿ ನೀಡಿ, ಈಗ ಪ್ರತಿಕೃತಿಯನ್ನು ನಮ್ಮಿಂದ ಕಸಿದುಕೊಂಡು ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಆದಾಗ್ಯೂ, ನಾವು ಇನ್ನೊಂದು ಪ್ರತಿಕೃತಿಯನ್ನು ತಂದು ಸುಟ್ಟುಹಾಕಿ ಪ್ರತಿಭಟಿಸುತ್ತೇವೆ. ಅಲ್ಲಿಯವರೆಗೂ ಈ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಹಿಂದೂ ಪರ ಹೋರಾಟಗಳನ್ನು ಹತ್ತುತ್ತಿದ್ದಾರೆ. ಇದು ಖಂಡನಾರ್ಹ. ಅದನ್ನು ಸಂಘಟನೆಯು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಸಚಿವ ಉದಯನಿಧಿ ಸ್ಟಾಲಿನ್ ಅವರು ಮಾಡಿರುವ ಅವಹೇಳನವು ಇಡೀ ಹಿಂದೂ ಧರ್ಮಕ್ಕೆ ಮಾಡಿದ ಅವಹೇಳನವಾಗಿದೆ. ಅಲ್ಲದೇ ಸಾಧು, ಸಂತರಿಗೂ ಮಾಡಿದ ಅವಮಾನವಾಗಿದೆ ಎಂದು ಟೀಕಿಸಿದ ಅವರು, ಭೂಮಿ ಹುಟ್ಟಿದಾಗಿನಿಂದಲೂ ಸನಾತನ ಧರ್ಮ ಇರುವುದು ಅವಿವೇಕಿಗೆ ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮುಂದಿನ ದಿನಗಳಲ್ಲಿ ಹಿಂದೂ ಧರ್ಮದ ಕುರಿತು ಯಾರಾದರೂ ಹಗುರವಾಗಿ ಮಾತನಾಡಿದರೆ ಅವರಿಗೆ ತಕ್ಕ ಉತ್ತರ ಕೊಡಲಾಗುವುದು ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಶಿಕಾಂತ್ ದೀಕ್ಷಿತ್, ಶಂಕರ್ ಚೋಕಾ, ಸಂತೋಷ್ ಸೋನವಾಣೆ, ಸುನೀಲ್ ರಾಠೋಡ್, ದಶರಥ್ ಪಿ. ಇಂಗೋಳೆ, ಭಾಗ್ಯಶ್ರೀ ಆಯಿ ಮಂಗಳಮುಖಿ, ಸಂಜನಾ ಆಯಿ ಮಂಗಳಮುಖಿ, ವಿಕಾಸ್ ಸಗರ್, ಉದಯ್ ಸುಲ್ತಾನಪೂರ್, ರಾಮಸೇವಕ ಶಿವು, ಸಂಗು ಕಾಳನೂರ್, ವಿಕಾಸ್ ಸಗರ್, ಪ್ರಕಾಶ್ ವಾಗ್ಮೋರೆ, ರಾಜು ಕಮಲಾಪೂರೆ ಮುಂತಾದವರು ಪಾಲ್ಗೊಂಡಿದ್ದರು.