ಸಧೃಢ ಸಮಾಜ ನಿರ್ಮಿಸಲು ಯುವಕರು ವಿವೇಕಾನಂದರ ಆದರ್ಶ ಆಳವಡಿಸಿಕೊಳ್ಳಿ: ಖೂಬಾ

ಬೀದರ:ಜ.13: ಇಡೀ ವಿಶ್ವದಲ್ಲಿ ವೀರ ಸನ್ಯಾಸಿ ಎಂದು ಸ್ವಾಮಿ ವಿವೇಕಾನಂದರನ್ನು ಬಿಟ್ಟರೆ ಬೇರೆ ಯಾರನ್ನು ಗುರುತಿಸುವುದಿಲ್ಲ. ಅಂದು ಚಿಕಾಗೋ ಭಾಷಣದಿಂದ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ಇಂದಿನ ಯುವಕರು ಸಧೃಢ ಸಮಾವನ್ನು ನಿರ್ಮಿಸಲು ಅವರ ಆದರ್ಶಗಳನ್ನು, ಬರಹ ಮತ್ತು ಭಾಷಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಂಸದ ಭಗವಂತ ಖೂಬಾ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೀದರ, ನೆಹರೂ ಯುವ ಕೇಂದ್ರ, ಎನ್.ಸಿ.ಸಿ. ಎನ್.ಎಸ್.ಎಸ್. ಯುವಕ/ಯುವತಿ ಸಂಘಗಳು, ಜಗದ್ಗುರು ಪಂಚಾಚಾರ್ಯ ಯುವಕ ಸಂಘ ಇವರುಗಳ ಸಹಯೋಗದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಬೀದರನಲ್ಲಿ “ಸ್ವಾಮಿ ವಿವೇಕಾನಂದರ 158ನೇ ಜಯಂತಿ ಉತ್ಸವದ ನಿಮಿತ್ಯ “ರಾಷ್ಟ್ರೀಯ ಯುವ ಸಪ್ತಾಹ” ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರೆರೆಯುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು.

ಯುವಕರು ವ್ಯಸನಮುಕ್ತರಾಗಿ ಬದುಕಬೇಕು. ರಾಷ್ಟ್ರಪ್ರಜ್ಞೆ, ಗುರುಭಕ್ತಿ, ಶಿಸ್ತು, ಸಂಸ್ಕಾರದ ಮುಖಾಂತರ ತನು ಮನ ಬುದ್ಧಿಯನ್ನು ಹತೋಟಿಯಲ್ಲಿಟ್ಟುಕೊಂಡು ಬದುಕಬೇಕು. ವಿವೇಕಾನಂದರು ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಹೇಳಿದ್ದು ತನ್ನ ಸ್ವಾರ್ಥಕ್ಕಾಗಿ ಅಲ್ಲ. ಬದಲಾಗಿ ದೇಶ, ರಾಜ್ಯ, ಸಮಾಜ, ಬಡವರ ಸೇವೆಯಲ್ಲಿ ನಿಸ್ವಾರ್ಥ ಸೇವೆಯ ಗುರಿ ಮುಟ್ಟುವವರೆಗೆ ನಿಲ್ಲಬೇಡಿ ಎಂದು ಹೇಳಿದ್ದಾರೆ. ಆದ್ದರಿಂದ ಯುವಕರು ಅಸತ್ಯ ಕಂಡುಬಂದಲ್ಲಿ ನಿರ್ಭಿಡೆಯಿಂದ ತಿರಸ್ಕರಿಸಿ ಸತ್ಯದ ತಳಹದಿಯ ಮೇಲೆ ರಾಷ್ಟ್ರವನ್ನು ಕಟ್ಟಲು ಮೈಕೊಡವಿ ಎದ್ದು ನಿಲ್ಲಬೇಕು ಎಂದು ಖೂಬಾ ನುಡಿದರು.

ಇಂದಿನ ಶಿಕ್ಷಣ ಸರ್ಕಾರಿ ನೌಕರಿಗೆ ಮಾತ್ರ ಸೀಮಿತವಾಗಿದೆ. ಆದರೆ ಶಿಕ್ಷಣದ ಮೂಲ ಗುರಿ ಮಕ್ಕಳಿಗೆ ಸಂಸ್ಕಾರ, ಒಳ್ಳೆಯದ್ದು ಯಾವುದು, ಕೆಟ್ಟದ್ದು ಯಾವುದು ಎಂಬ ತಿಳುವಳಿಕೆ ಮೂಡಿಸುವುದಾಗಿರಬೇಕು. ಆದ್ದರಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವುದರ ಮುಖಾಂತರ ಮಕ್ಕಳಿಗೆ ಉತ್ತಮ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಯುವಕರು ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕು ಎಂದು ಖೂಬಾ ನುಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಶ್ರೀ ಜ್ಯೋತಿರ್ಮಯಾನಂದ ಸ್ವಾಮಿಗಳು ಮಾತನಾಡಿ ” ಇಡೀ ವಿಶ್ವಕ್ಕೆ ಮಾದರಿಯಾಗಿ ವಿಶ್ವದ ಯುವಕರಿಗೆ ಸ್ಫೂರ್ತಿ ನೀಡಿದ ಏಕೈದ ವೀರ ಸನ್ಯಾಸಿ ಎಂದರೆ ಸ್ವಾಮಿ ವಿವೇಕಾನಂದರು. ವಿವೇಕಾನಂದರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಮಾತಿನಲ್ಲಿ ಮಮತೆ, ಕಂಚಿನ ಕಂಠದ ವಾಗ್ಝರಿ, ಧೀರೋದಾತ್ತ ನುಡಿ, ಉನ್ನತ ವ್ಯಕ್ತಿತ್ವ ಅವರದಾಗಿತ್ತು. ಮಾನವನ ಹಿತಕ್ಕಾಗಿ ವಿವೇಕರು ಮಾಡಿದ ಕಾರ್ಯ ಅದ್ಭುತವಾಗಿತ್ತು. ಕೇವಲ 3 ನಿಮಿಷದ ಭಾಷಣ ಅಂದು ಇಡೀ ವಿಶ್ವಕ್ಕೆ ಪ್ರೇರಣೆಯಾಗುತಿತ್ತು ಎಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ. ಅವರ ಭಾಷಣಗಳಿಂದ ಇಡೀ ವಿಶ್ವದ ಯುವಕರು ಎದ್ದು ನಿಂತರು. ದೇವಭಕ್ತನಾಗುವುದಕ್ಕಿಂತ ಮಾನವ ಭಕ್ತನಾಗಿ ಬದುಕಿ ಎಂದು ಹೇಳಿದ್ದರು. ಇನ್ನೊಬ್ಬರಿಗಾಗಿ ಹೃದಯ ಮಿಡಿಯುವ ವ್ಯಕ್ತಿಯೇ ನಿಜವಾದ ನಾಯಕನಾಗುತ್ತಾನೆ. ಅಂತಹ ಧೀರ ನಾಯಕತ್ವ ಸ್ವಾಮಿ ವಿವೇಕಾನಂದರಲ್ಲಿತ್ತು ಎಂದು ಪೂಜ್ಯ ಸ್ವಾಮೀಜಿ ನುಡಿದರು.

ಜಿಲ್ಲಾಧಿಕಾರಿ ಡಾ.ರಾಮಚಂದ್ರನ್ ಆರ್. ಅವರು ಮಾತನಾಡಿ “ವಿವೇಕಾನಂದರ ಬರಹ ಮತ್ತು ಭಾಷಣಗಳನ್ನು ಯುವಕರು ಪ್ರತಿಕ್ಷಣ ನೆನೆಸಿಕೊಳ್ಳಬೇಕು. ದೀಪವನ್ನು ಯಾವ ದಿಕ್ಕಿನಿಂದ ಬೆಳಗಿಸಿದರೂ ಅದು ಮೇಲ್ಭಾಗಕ್ಕೆ ಮಾತ್ರ ಉರಿಯುವಂತೆ ನಮಗೆ ನಾಲ್ಕು ದಿಕ್ಕಿನಿಂದ ಎಷ್ಟೇ ಅಡೆತಡೆಗಳು ಬಂದರೂ ನಮ್ಮ ಗುರಿ ಉನ್ನತ ಮಟ್ಟದ್ದಾಗಿರಬೇಕು ಎಂದರು. ಯುವಕರು ತಮ್ಮೊಳಗೆ ಅಡಗಿದ್ದ ಸೂಪ್ತ ಶಕ್ತಿಯನ್ನು ಜಾಗೃತಿ ಮಾಡಿಕೊಂಡು ಗುರಿ ತಲುಪಲು ಪ್ರಯತ್ನಿಸಬೇಕು. ಕಠಿಣ ಪರಿಶ್ರಮ, ಸಮಯಪ್ರಜ್ಞೆ, ಸತತ ಪ್ರಯತ್ನವೇ ಗುರಿ ಮುಟ್ಟಲು ಮೆಟ್ಟಿಲುಗಳಾಗಿವೆ. ಉತ್ತಮವಾದ ಕನಸು ಕಾಣಬೇಕು. ಆ ಕನಸಿನ ಬೆನ್ನೇರಿ ಸಾಧನೆ ಮಾಡಲು ಶ್ರಮಿಸಬೇಕು. ಯುವಕರು ಅಧ್ಯಯನ ಮಾಡಲು ವಯಸ್ಸು ಮುಖ್ಯ ಅಲ್ಲ. ಮನಸ್ಸು ಮುಖ್ಯ. ವಿವೇಕಾನಂದರು ಕಡಿಮೆ ಅವಧಿ ಬದುಕಿದರೂ ದೊಡ್ಡ ಸಾಧನೆ ಮಾಡಿದ ಹಾಗೆ ಇಂದಿನ ಯುವಕರು ಗುರಿ ಮುಟ್ಟಲು ಪ್ರಯತ್ನಿಸಬೇಕು ಎಂದು ನುಡಿದರು.

ಅಧ್ಯಕ್ಷತೆಯನ್ನು ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ವಹಿಸಿದ್ದರು. ವೇದಿಕೆ ಮೇಲೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಅಪರ ಜಿಲ್ಲಾಧಿಕಾರಿ ರುದ್ರೇಶ್ ಗಾಳಿ, ನೆಹರೂ ಯುವ ಕೇಂದ್ರ ಯುವ ಸಮನ್ವಯಾಧಿಕಾರಿಗಳಾದ ಮಯೂರಕುಮಾರ ಗೊರ್ಮೆ, ಪ್ರಥಮ ದರ್ಜೆ ಗುತ್ತಿಗೆದಾರರಾದ ಗುರುನಾಥ ಕೊಳ್ಳೂರ, ಗ್ಲೋಬಲ್ ಸೈನಿಕ್ ಅಕಾಡೆಮಿ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇಂಪುರ, ವೈಜಿನಾಥ ಮಾನ್ಪಡೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಶಿವಯ್ಯಾ ಸ್ವಾಮಿ, ಡಾ.ಪ್ರಭುಲಿಂಗ ಬಿರಾದಾರ, ಓಂಪ್ರಕಾಶ ರೊಟ್ಟೆ, ಎನ್.ಸಿ.ಸಿ. ಅಧಿಕಾರಿಗಳಾದ ಮೇಜರ್ ಡಾ.ಪಿ. ವಿಠಲರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಯನ್ನು ನಿರ್ವಹಿಸುತ್ತಿರುವ ನಾಗೇಶ ಪಾಟೀಲ ಹಾಗೂ ವಿವೇಕ ವಾಲಿಯವರನ್ನು ಸನ್ಮಾನಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಜಿ.ನಾಡಿಗೇರ್ ಸ್ವಾಗತಿಸಿದರು. ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ನಿರೂಪಿಸಿ ವಂದಿಸಿದರು.