ಸಧೃಢ ಸಮಾಜ ನಿರ್ಮಾಣದಲ್ಲಿ ಪ್ರಬುದ್ಧ ಶಿಕ್ಷಕರ ಪಾತ್ರ ಹಿರಿದು : ಡಾ. ಕೆ.ಸಿ.ವೀರಣ್ಣ

ಬೀದರ:ಸೆ.7: ಶಿಕ್ಷಕರಾದವರು ತಮ್ಮ ವೃತ್ತಿಯಲ್ಲಿ ಪ್ರಾವೀಣ್ಯತೆ, ಪ್ರಬುದ್ಧತೆ ಹಾಗೂ ವಿಷಯಜ್ಞಾನ ಹೊಂದಿ ಮಕ್ಕಳ ಬದುಕನ್ನು ಸಂಸ್ಕಾರಯುತವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಸೃಜನಶೀಲತೆಯಿಂದ ಕಾರ್ಯಮಾಡಿದರೆ ಸಧೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರವನ್ನು ಸರ್ವಾಂಗಸುಂದರವಾಗಿ ನಿರ್ಮಾಣ ಮಾಡಬಹುದು ಎಂದು ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಸಿ ವೀರಣ್ಣ ನುಡಿದರು.
ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಪ್ರತಿಯೊಂದು ವೃತ್ತಿನಿರ್ಮಾಣಕ್ಕೆ ಶಿಕ್ಷಕರೇ ಮೂಲ ಕಾರಣರಾಗಿರುತ್ತಾರೆ. ತನ್ಮೂಲಕ ಒಂದು ರಾಷ್ಟ್ರವನ್ನು ವಿಶ್ವದಲ್ಲಿ ಬೆಳಗಬೇಕಾದರೆ ಶಿಕ್ಷಕರ ಪಾತ್ರ ಅಗಾಧವಾದುದಾಗಿದೆ. ಶಿಕ್ಷಕರು ತಮ್ಮ ಬೋಧನೆಯ ಜೊತೆಗೆ ಸಂಶೋಧನೆಯ ಸ್ಪರ್ಶ ನೀಡಿದರೆ ಇನ್ನೂ ಪರಿಣಾಮಕಾರಿ ಬೋಧನೆ ಮಾಡಬಹುದು. ಜ್ಞಾನ, ಕೌಶಲ್ಯ ಮತ್ತು ಮನೋಭಾವ ಇವುಗಳು ಶಿಕ್ಷಕರಿಗೆ ಬಹಳ ಮುಖ್ಯ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಗಟ್ಟಿಯಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಶಿಕ್ಷಕರು ತಾವು ನೀಡುವ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಬೇಕು. ಹೀಗಾದಾಗ ಮಾತ್ರ ಮಕ್ಕಳನ್ನು ಮುಂದಿನ ಭವ್ಯ ಭಾರತದ ಸತ್ಪ್ರಜೆಯನ್ನಾಗಿ ತಯಾರಿಸಬಹುದು ಎಂದು ಡಾ. ಕೆ.ಸಿ ವೀರಣ್ಣ ನುಡಿದರು.
ಗುಲಬರ್ಗಾ ವಿ.ವಿ.ಯ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ಬಿ.ಜಿ.ಮೂಲಿಮನಿ ಮಾತನಾಡಿ “ಜ್ಞಾನಕ್ಕೆ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಜ್ಞಾನವೇ ನಮಗೆ ಎಲ್ಲವುಗಳಿಂದ ರಕ್ಷಣೆ ಮಾಡುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಿಸುತ್ತದೆ. ಹಾಗಾಗಿಯೇ ಡಾ. ರಾಧಾಕೃಷ್ಣನ್ ಅವರು ಮೈಸೂರಿನಿಂದ ವರ್ಗಾವಣೆಯಾಗಿ ಹೋಗುವಾಗ ಸ್ವತಃ ಮಕ್ಕಳೇ ರಥದಲ್ಲಿ ಕುಳ್ಳಿರಿಸಿ ರೈಲ್ವೆ ನಿಲ್ದಾಣವರೆಗೆ ಬಿಡುತ್ತಾರೆ. ವಿಶ್ವದ ಕ್ರೂರಿ ಎನಿಸಿಕೊಂಡಿರುವ ಸ್ಟಾಲಿನ್‍ಗೂ ಮನಃಪರಿವರ್ತನೆ ಮಾಡಿದ ಕೀರ್ತಿ ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ. ನಮ್ಮಲ್ಲಿರುವ ಜ್ಞಾನದಿಂದ ಸರ್ವರೂ ನಮಗೆ ಗೌರವಿಸುತ್ತಾರೆ. ಶಿಕ್ಷಕರು ಮೊದಲು ತಾವುಗಳು ಪರಿಪೂರ್ಣರಾಗಿ ವಿಷಯಜ್ಞಾನಿಗಳಾಗಿ ಮಕ್ಕಳಿಗೆ ಬೋಧನೆ ಮಾಡಿದರೆ ಉತ್ತಮ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರಾಶಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ “ಕಾಲೇಜಿನ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸರ್ವಪ್ರಯತ್ನ ಮಾಡಿ. ನಿಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ. ವಿದ್ಯಾರ್ಥಿಗಳು ಕೂಡಾ ಸಂಕ್ಷಿಪ್ತ ಮಾರ್ಗದಲ್ಲಿ ಸಾಧನೆ ಮಾಡಲು ಹೊರಡಬಾರದು. ಸತತ ಅಧ್ಯಯನ, ನಿರಂತರ ಪ್ರಯತ್ನ ಮಾಡಬೇಕು. ಕೇವಲ ಪದವಿ ಪ್ರಮಾಣ ಪತ್ರ ಪಡೆದರೆ ಸಾಲದು. ಅನುಭವದಿಂದ ಉನ್ನತ ಮಟ್ಟಕ್ಕೆ ಬೆಳೆಯಲು ಪ್ರಯತ್ನಿಸಬೇಕು. ಜೀವನದಲ್ಲಿ ಮಕ್ಕಳು ಉನ್ನತ ಸ್ಥಾನಕ್ಕೇರಿ ಕಾಲೇಜಿಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಇದೇ ವೇಳೆ ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರಿಗೆ 32 ಜಿಬಿ ಪೆನ್‍ಡ್ರೈವ್ ನೀಡಿ ಮಕ್ಕಳಿಂದಲೇ ಸನ್ಮಾನಿಸಲಾಯಿತು. ಹಾಗೂ ಗಣಕಯಂತ್ರ ವಿಭಾಗದ ವತಿಯಿಂದ ತಯಾರಿಸಲಾದ ಜಾವಾ ಕೋರ್ಸ್‍ನ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಹಂಗರಗಿ ಕಾಲೇಜಿನ ಕುರಿತು ಪರಿಚಯ ಮಾಡಿಕೊಟ್ಟರು. ಪ್ರಾಧ್ಯಾಪಕ ಬಿ.ವಿ.ರವಿಚಂದ್ರನ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕು. ಸುಷ್ಮಾ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಶ್ರೀಕಾಂತ ದೊಡ್ಡಮನಿ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಅನೀಲಕುಮಾರ ಚಿಕ್ಕಮಾಣೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಕರಾಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಕರಾಶಿ ಸಂಸ್ಥೆಯ ಪದಾಧಿಕಾರಿಗಳಾದ ರವಿ ಹಾಲಹಳ್ಳಿ, ಸಿದ್ಧರಾಜ ಪಾಟೀಲ, ಎಚ್.ಎಸ್.ಪಾಟೀಲ, ವೀರಭದ್ರಪ್ಪ ಬುಯ್ಯಾ, ಚಂದ್ರಕಾಂತ ಶೆಟಕಾರ, ಪ್ರಾಚಾರ್ಯರಾದ ಡಾ. ಎಂ.ಎಸ್.ಚೆಲ್ವಾ, ಉಪನ್ಯಾಸಕರಾದ ಬಸವರಾಜ ಕೊಡಂಬಲ್, ಡಾ. ಶಶಿಧರ ಪಾಟೀಲ, ಸೋಮನಾಥ ಮುದ್ದಾ, ಡಾ. ಮಾದಯ್ಯ ಸ್ವಾಮಿ, ಮಧುಸೂಧನ ಕುಲಕರ್ಣಿ, ಅಶೋಕ ಹುಡೇದ್, ರಾಜಶೇಖರ ತಾಂಡೂರ, ಪ್ರೊ. ಡಿ.ಬಿ.ಕಂಬಾರ, ಪ್ರೊ. ರಾಜೇಂದ್ರ ಬಿರಾದಾರ, ಲಕ್ಷ್ಮೀ ಕುಂಬಾರ, ಆಶಾ ಮುದ್ದಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.