ಸದ್ಯದಲ್ಲೇ ರಶ್ಯಾದಲ್ಲಿ ಭಾರತೀಯ ಕಂಪೆನಿಗಳ ಮಳಿಗೆ ಆರಂಭ?!

ಮಾಸ್ಕೋ, ಜೂ.೨೩- ಉಕ್ರೇನ್ ಮೇಲೆ ಯುದ್ದ ಹೇರಿರುವ ಹಿನ್ನೆಲೆಯಲ್ಲಿ ವಿಶ್ವ ಸಮುದಾಯದಿಂದ ಆರ್ಥಿಕ ನಿರ್ಬಂಧಕ್ಕೆ ಒಳಗಾಗಿರುವ ರಶ್ಯಾದಲ್ಲಿ ಸದ್ಯ ಬಹುತೇಕ ಜಾಗತಿಕ ಕಂಪೆನಿಗಳು ಪಲಾಯನ ಮಾಡಿವೆ. ಈ ನಡುವೆ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅಚ್ಚರಿಯ ಹೇಳಿಕೆ ನೀಡಿದ್ದು, ರಶ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ಆರಂಭಿಸುವ ಕುರಿತಾದ ಮಾತುಕತೆ ಸದ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಉಕ್ರೇನ್ ಮೇಲಿನ ದಾಳಿಯಿಂದ ಒಂದೆಡೆ ರಶ್ಯಾ ಇಂಧನ ವಿಚಾರದಲ್ಲಿ ಭಾರೀ ಲಾಭ ಮಾಡಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಜಗತ್ತಿನ ಹಲವು ಕಂಪೆನಿಗಳು ರಶ್ಯಾವನ್ನು ತೊರೆದಿದೆ. ಇದು ಅಲ್ಲಿನ ಆರ್ಥಿಕ ಹೆಚ್ಚಿನ ಹಾನಿ ಮಾಡಿದೆ. ಸದ್ಯ ಅಲ್ಲಿಂದ ತೆರವಾಗಿರುವ ಹಲವು ವಾಣಿಜ್ಯ ಕಂಪೆನಿಗಳ ಜಾಗವನ್ನು ಭಾರತೀಯ ಕಂಪೆನಿಗಳು ತುಂಬಲಿವೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗುವಂತೆ ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಹೇಳಿಕೆ ನೀಡಿರುವ ಪುತಿನ್, ರಶ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ಆರಂಬಿಸುವ ಕುರಿತಾದ ಮಾತುಕತೆ ಸದ್ಯ ನಡೆಯುತ್ತಿದೆ. ಅಲ್ಲದೆ ಚೀನಾದಿಂದ ಕಾರ್ ಹಾಗೂ ಹಾರ್ಡ್‌ವೇರ್‌ಗಳ ಆಮದು ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ರಶ್ಯಾ ಹಾಗೂ ಬ್ರಿಕ್ಸ್ ನಡುವಿನ ವ್ಯಾಪಾರದಲ್ಲಿ ೩೮ ಪ್ರತಿಶತ ಏರಿಕೆ ದಾಖಲಾಗಿದ್ದು, ಸದ್ಯದ ವಹಿವಾಟು ೪೫ ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ. ಉಕ್ರೇನ್ ಮೇಲಿನ ದಾಳಿಯ ಬಳಿಕ ಆಪಲ್, ಜಗತ್ ಪ್ರಸಿದ್ಧ ಕಾರ್‌ಗಳ ಸಹಿತ ಹಲವು ಜಾಗತಿಕ ಕಂಪೆನಿಗಳು ರಶ್ಯಾವನ್ನು ತೊರೆದಿವೆ.