ಸದ್ಯದಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು,ಏ.೧೨:ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರೋಮೊ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಣಾಳಿಕೆ ಸಿದ್ಧತೆ ಕಾರ್ಯ ನಡೆದಿದ್ದು, ಆದಷ್ಟು ಬೇಗ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ ಎಂದರು.
ನಾಲ್ಕು ತಿಂಗಳ ಹಿಂದೆ ಪ್ರಣಾಳಿಕೆ ತಯಾರಿಕೆಯ ಜವಾಬ್ದಾರಿ ನೀಡಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಪ್ರಣಾಳಿಕೆ ತಯಾರಾಗಬಾರದು ಎಂದು ಜನರ ಜತೆ ಚರ್ಚಿಸಿ ಅವರ ಅಭಿಪ್ರಾಯ, ಸಲಹೆ ಪಡೆದಿದ್ದೇನೆ. ನೌಕರರು, ವ್ಯಾಪಾರಸ್ಥರು, ಅಧಿಕಾರಿಗಳು, ಅಟೋ ಚಾಲಕರು, ಬೀದಿ ಬದಿ ವ್ಯಾಪಾರಿ ಗಳು, ಕಾರ್ಮಿಕರು ಎಲ್ಲರ ಜತೆಯೂ ಮಾತನಾಡಿದ್ದೇವೆ. ಒಳ್ಳೆಯ ಆಡಳಿತ ಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ರಾಜ್ಯದಲ್ಲಿ ಯಾವ ರೀತಿ ಆಡಳಿತ ಇದೆ ಎಂಬುದು ಜನತೆಗೆ ಗೊತ್ತಿದೆ. ತಹಸೀಲ್ದಾರ್ ಕಚೇರಿಯಲ್ಲಿ ಲಂಚಮುಕ್ತ ಕೆಲಸವಾಗಬೇಕು. ಬಿಜೆಪಿ ಸರ್ಕಾರದಲ್ಲಿ ಲಂಚಮುಕ್ತ ಆಗಲ್ಲ, ಇದನ್ನು ಜನರೇ ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಏನೆಲ್ಲ ಅಭಿವೃದ್ಧಿ ಯಾಗಬೇಕು, ಯುವಕರಿಗೆ ಉದ್ಯೋಗ ಒದಗಿಸುವುದು, ಧಾರ್ಮಿಕ ಸಾಮರಸ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ರೂಪಿಸಲಾಗುತ್ತದೆ ಎಂದರು.
ಚುನಾವಣೆಯಲ್ಲಿ ಬಿಜೆಪಿಯವರು ಕಾಂಗ್ರೆಸ್‌ನ ಕೆಲ ನಾಯಕರನ್ನು ಟಾರ್ಗೇಟ್ ಮಾಡಿದ್ದಾರೆ. ಆದರೆ, ನಾವು ಬಿಜೆಪಿಯನ್ನೇ ಟಾರ್ಗೇಟ್ ಮಾಡಿ, ಬಿಜೆಪಿಯನ್ನು ಕಿತ್ತು ಹಾಕಲು ತೀರ್ಮಾನಿಸಿದ್ದೇವೆ. ಜನರ ತೀರ್ಮಾನವೂ ಇದೆ ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಧುಬಂಗಾರಪ್ಪ, ಪ್ರೊ.ರಾಧಾಕೃಷ್ಣ ಉಪಸ್ಥಿತರಿದ್ದರು.