ಸದ್ಯದಲ್ಲೇ ಕಲಬುರಗಿಯಲ್ಲಿ ಪೈಲಟ್ ತರಬೇತಿ ಕೇಂದ್ರ ಆರಂಭ

ಕಲಬುರಗಿ, ನ. 18 : ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ವಿಮಾನಗಳ ಪೈಲಟ್ ತರಬೇತಿ ಕೇಂದ್ರ ಆರಂಭಿಸಲಾಗುತ್ತದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ತಿಳಿಸಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬುಧವಾರ ಜ್ಯೋತಿ ಬೆಳಗಿಸಿ, ಕೇಕ್ ಕತ್ತರಿಸಿ, ಬೋರ್ಡಿಂಗ್ ಪಾಸ್ ನೀಡುವ ಮೂಲಕ ಕಲಬುರಗಿ-ದೆಹಲಿ(ಹಿಂಡನ್) ವಿಮಾನಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (ಐಜಿಆರ್‍ಯುಎ) ವತಿಯಿಂದ ಪೈಲಟ್ ತರಬೇತಿ ಕೇಂದ್ರ ಆರಂಭವಾಗುತ್ತಿದ್ದು, ಈಗಾಗಲೇ 4 ಟ್ರೈನಿಂಗ್ ವಿಮಾನಗಳನ್ನು ಕಲಬುರಗಿಗೆ ಕಳುಹಿಸಲು ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಜ್ಞಾನೇಶ್ವರ್ ರಾವ್ ಅವರು ಇಂದು ದೆಹಲಿಗೆ ತೆರಳಿ ತರಬೇತಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಪೈಲಟ್ ತರಬೇತಿ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕದ ಪೈಲಟ್ ಉದ್ಯೋಗಾಂಕ್ಷಿಗಳು ತರಬೇತಿ ಪಡೆದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದರು.
ವಾರಕ್ಕೆ 3 ದಿನ ಓಡಾಟ: ಸ್ಟಾರ್ ಏರ್ ವಿಮಾನ ದೆಹಲಿ (ಹಿಂಡನ್)ಗೆ ವಾರದಲ್ಲಿ ಮೂರು ದಿನ ಓಡಾಟ ನಡೆಸಲಿದೆ. ಮಂಗಳವಾರ, ಬುಧವಾರ ಹಾಗೂ ಶನಿವಾರಗಳಂದು ಪ್ರತಿದಿನ ಕಲಬುರಗಿಯಿಂದ ಬೆಳಿಗ್ಗೆ 10.20ಕ್ಕೆ ಹೊರಟು, ಮಧ್ಯಾಹ್ನ 12.40ಕ್ಕೆ ದೆಹಲಿ ತಲುಪಲಿದೆ. ಇದೇ ದಿನಗಳಂದು ಮಧ್ಯಾಹ್ನ 1.10ಕ್ಕೆ ದೆಹಲಿಯಿಂದ ಹೊರಟು 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ ಎಂದು ಅವರು ಮಾಹಿತಿ ನೀಡಿದರು.
ರಾತ್ರಿ ವಿಮಾನ ಸೇವೆ: ಮುಂದಿನ ದಿನಗಳಲ್ಲಿ ಕಲಬುರಗಿ ವಿಮಾನನಿಲ್ದಾಣದಿಂದ ರಾತ್ರಿ ವೇಳೆಯೂ ವಿಮಾನಯಾನ ಸಹ ಆರಂಭಿಸಲಾಗುತ್ತದೆ. ನಾನು ಈ ಸಂಬಂಧ ಸಂಸತ್ತಿನಲ್ಲಿ ಹಲವು ಬಾರಿ ಪ್ರಶ್ನೆ ಕೇಳಿದಾಗ, ಇದೇ ಡಿಸೆಂಬರ್‍ನಿಂದ ರಾತ್ರಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂಬ ಬಗ್ಗೆ ಸಚಿವರು ಉತ್ತರ ನೀಡಿರುತ್ತಾರೆ. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ 2021 ಜುಲೈಗೆ ವಿಮಾನಗಳ ರಾತ್ರಿ ಸಂಚಾರ ಶುರುವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಹಾಗೆಯೇ ಸರಕು ಸಾಗಾಣೆ (ಕಾರ್ಗೋ) ವಿಮಾನ ಸಂಚಾರಕ್ಕೂ ಅವಕಾಶ ದೊರೆಯುತ್ತಿದೆ ಎಂದು ಅವರು ಹೇಳಿದರು.
ಕೋವಿಡ್-19 ಸಂದರ್ಭದಲ್ಲಿಯೂ ಕಲಬುರಗಿ ವಿಮಾನ ನಿಲ್ದಾಣ ದೇಶದಲ್ಲೇ ಅತಿಹೆಚ್ಚು ಚಟುವಟಿಕೆಯಿಂದ ಕೂಡಿರುವ ವಿಮಾನ ನಿಲ್ದಾಣವಾಗಿದೆ ಎಂದು ಹೇಳಿದರು.
ಮುಂಬೈ, ತಿರುಪತಿ,ಹುಬ್ಬಳ್ಳಿ, ಹೈದ್ರಾಬಾದ್‍ಗಳಿಗೂ ಮುಂದಿನ ದಿನದಲ್ಲಿ ವಿಮಾನಯಾನ ಆರಂಭವಾಗಲಿದೆ ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮೂಡ್, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಜ್ಞಾನೇಶ್ವರ್ ರಾವ್, ಸ್ಟಾರ್ ಏರ್ ನ ಮ್ಯಾನೇಜರ್ ಸಪ್ನಿಲ್ ಹರ್ಕತ್ ಮುಂತಾದವರು ಇದ್ದರು.