ಸದ್ಯದಲ್ಲೇ ಉಳಿದ ಕ್ಷೇತ್ರಗಳ ಪಟ್ಟಿ ಬಿಡುಗಡೆ:ಡಿಕೆಶಿ

ಬೆಂಗಳೂರು, ಏ.11-ಕಾಂಗ್ರೆಸ್ ಈಗಾಗಲೇ 167 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಉಳಿದ ಕ್ಷೇತ್ರಗಳ ಪಟ್ಟಿ ಕೂಡ ಸಧ್ಯದಲ್ಲೇ ಬಿಡುಗಡೆ ಆಗಲಿದೆ. ಏನೇ ನಿರ್ಧಾರ ತೆಗೆದುಕೊಂಡರೂ ಮಾಹಿತಿ ನೀಡುತ್ತೇವೆ.ಶುಭ ಮುಹೂರ್ತ, ಶುಭ ಘಳಿಗೆ ನೋಡಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇದುವರೆಗೂ ಒಬ್ಬ ಅಭ್ಯರ್ಥಿಯ ಹೆಸರು ಬಿಡುಗಡೆ ಮಾಡಿಲ್ಲ. ಈಶ್ವರಪ್ಪ ಅವರು ತಮ್ಮ ಹೈಕಮಾಂಡ್ ನಾಯಕರಿಗೆ ಲವ್ ಲೆಟರ್ ಬರೆದಿದ್ದಾರೆ. ಅವರನ್ನು ಕೇಳದೆ ಕೇವಲ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಮಾತ್ರ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಪ್ರತಿಕ್ತಿಯಿಸಿದ ಅವರು, ಸವದಿ ಹಿರಿಯ ನಾಯಕರು. ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಪ್ರಸ್ತಾಪವಾಗಿಲ್ಲ. ಸೋಮಣ್ಣ ಅವರು ಕೂಡ ಪಕ್ಷ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ಸುದ್ದಿಯಾಗಿತ್ತು. ಆದರೆ ಅವರು ಯಾವತ್ತೂ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಮಾಡಿಲ್ಲ. ಶಿವಮೊಗ್ಗ, ಹಾವೇರಿ ಇತರೆ ಭಾಗಗಳ ಕೆಲ ನಾಯಕರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಅವರು ಬಂದಾಗ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಖಾಲಿ ಇಲ್ಲದಿದ್ದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಸೂಕ್ತವಲ್ಲ ಎಂದು ತಿಳಿಸಿದರು.
ಈಶ್ವರಪ್ಪ ಅವರಿಗೆ ಒಳ್ಳೆಯದಾಗಲಿ. ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು. ಅವರ ಪಕ್ಷ ಹಾಗೂ ಅವರ ತೀರ್ಮಾನ, ಅವರಿಗೆ ಒಳ್ಳೆಯದಾಗಲಿ’ ಎಂದು ಹೇಳಿದರು.
ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಬಗ್ಗೆ ತಾವು ಚರ್ಚೆ ಮಾಡುವುದಿಲ್ಲ. ಅವರ ರಾಜಕೀಯ ಅವರು ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಅವರ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಅವರ ಜತೆ ನಾವು ಕೆಲಸ ಮಾಡಿ ಈಗ ಅವರು ಸರಿ ಇಲ್ಲ ಎಂದು ದೂರುವುದು ಸರಿಯಲ್ಲ ಎಂದರು.