ಸದ್ಯಕ್ಕೆ ಲಾಕ್‌ಡೌನ್ ಇಲ್ಲ


ಬೆಂಗಳೂರು, ಮಾ. ೨೨- ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸದ್ಯಕ್ಕೆ ಲಾಕ್‌ಡೌನ್ ಜಾರಿ ಮಾಡದಿರುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ಪರಿಸ್ಥಿತಿ ಇಲ್ಲ. ಕಳೆದ ವರ್ಷಕ್ಕೂ ಈ ವರ್ಷಕ್ಕೆ ಪರಿಸ್ಥಿತಿ ಬೇರೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಜನರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಕೋರ್ಟ್‌ಗೆ ಹೋಗುವುದು ನಮ್ಮ ಹಕ್ಕಾಗಿದೆ. ಅದನ್ನು ಪ್ರಶ್ನಿಸುವುದಕ್ಕೆ ಕಾಂಗ್ರೆಸ್‌ನವರಿಗೆ ಯಾವುದೇ ಹಕ್ಕಿಲ್ಲ. ಕಾಂಗ್ರೆಸ್ ನಾಯಕರು ನೀತಿ ಸಿದ್ಧಾಂತದ ಮೇಲೆ ಹೋರಾಟ ಮಾಡಬೇಕು. ಅವರಿಗೆ ಹೋರಾಟ ಮಾಡಲು ಯಾವುದೇ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಪತನಗೊಂಡ ಕಾರಣಕ್ಕೆ ನಮ್ಮ ಮೇಲೆ ವೈಯುಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿವ ಕೃಷಿ ಕಾಯ್ದೆಗಳು ರೈತರ ಪರವಾಗಿಯೇ ಇರುವ ಕಾಯ್ದೆಗಳಾಗಿವೆ. ಹಾಗಾಗಿ ಈ ಕಾಯ್ದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು