ಸದ್ಯಕ್ಕಿಲ್ಲ ಭಕ್ತರಿಗೆ ಸವದತ್ತಿ ಯಲ್ಲಮ್ಮನ ದರ್ಶನ

ಬೆಳಗಾವಿ. ನ ೯- ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನ ದರ್ಶನಕ್ಕಾಗಿ ಭಕ್ತರು ಇನ್ನಷ್ಟು ದಿನ ಕಾಯಬೇಕಿದೆ. ಹೌದು ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ, ಚಿಂಚಲಿ ಮಾಯಕ್ಕ ಹಾಗೂ ಜೋಗಳಬಾವಿ ಸತ್ತವ್ವ ದೇವಸ್ಥಾನ ನವೆಂಬರ್ ೩೦ರವರೆಗೆ ಭಕ್ತರ ಪ್ರವೇಶಕ್ಕೆ ನಿಷೇಧ ಮುಂದುವರೆಸಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿಯಿಂದ ಎಲ್ಲವೂ ಅಸ್ತವ್ಯಸ್ಥಗೊಂಡಿದೆ. ಮಾರ್ಚ್ ತಿಂಗಳ ೨೨ರಂದು ಒಂದು ದಿನ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ನಂತರ ಲಾಕ್ ಡೌನ್ ಕಾರಣದಿಂದಲೂ ಇದು ಮುಂದುವರೆದಿದೆ. ಇನ್ನೂ ಅನ್ ಲಾಕ್ ಮಾಡಿ ಆದೇಶ ಜಾರಿ ಮಾಡಿ ರಾಜ್ಯದ ಬಹುತೇಕ ದೇವಾಲಯಗಳು ಓಪನ್ ಆಗಿ ಈಗಾಗಲೇ ತಿಂಗಳುಗಳೇ ಕಳೆದಿವೆ. ಆದರೆ, ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವಾಸ್ಥಾನಕ್ಕೆ ಮತ್ತೆ ನಿಷೇಧ ಮುಂದುವರೆದಿದ್ದು, ಭಕ್ತರು ಈ ದೀಪಾವಳಿಗೂ ಯಲ್ಲಮ್ಮ ತಾಯಿ ದರ್ಶನದಿಂದ ವಂಚಿತರಾಗಲಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರತಿ ಹುಣ್ಣಿಮೆಯಂದು ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಜಾತ್ರೆ ಸಂಭ್ರಮ ಇರುತ್ತಿತ್ತು. ಇನ್ನೂ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯುವ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯ. ಕಳೆದ ೮ ತಿಂಗಳಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನೀಡದೇ ಇರುವುದು ಇದೀಗ ಭಕ್ತರ ಬೇಸರಕ್ಕೆ ಕಾರಣವಾಗಿದೆ. ಇನ್ನೂ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವಿಯ ದರ್ಶನ ಭಾಗ್ಯ ಭಕ್ತರಿಗೆ ಸಿಕ್ಕಿಲ್ಲ.

ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸೋದು ವಾಡಿಕೆಯಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಂದ ಬರೋ ಭಕ್ತರಿಂದ ಕೊರೊನಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ.