ಸದ್ದಿಲ್ಲದೇ ಶಿಕ್ಷಕರಲ್ಲಿ ಕನ್ನಡ ಭಾಷಾ ಪ್ರೀತಿಯನ್ನು ಹೆಚ್ಚಿಸುತ್ತಿರುವ ಶಿಕ್ಷಕ ಸಂತೋಷ ಬಂಡೆ

ವಿಜಯಪುರ, ನ.20-ತಾಲೂಕಿನ ನಾಗಠಾಣ ಗ್ರಾಮದವರಾದ ಶಿಕ್ಷಕ ಸಂತೋಷ ಬಂಡೆ ಅವರು ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ ಶಿಕ್ಷಕರಾಗಿ ಸೇವೆಗೈಯುತ್ತಿದ್ದಾರೆ.
2018 ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಸಹ ಕಾರ್ಯದರ್ಶಿಯಾಗಿ ನೇಮಕಗೊಂಡು ಇಡೀ ರಾಜ್ಯದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಹಂತದ ಶಿಕ್ಷಕರುಗಳಿಗೆ ರಾಜ್ಯ ಮಟ್ಟದ ಗೀತೆ ರಚನೆ, ಕವನ ವಾಚನ, ಪುಸ್ತಕ ಪರಿಚಯದಂತಹ ಅನೇಕ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿ, ಸದ್ದಿಲ್ಲದೇ ಶಿಕ್ಷಕರಲ್ಲಿ ಕನ್ನಡ ಭಾಷಾ ಪ್ರೀತಿಯನ್ನು ಹೆಚ್ಚಿಸುತ್ತಿದ್ದಾರೆ.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಮೈಗೂಡಿಸಿಕೊಳ್ಳುವದರ ಜೊತೆಗೆ ಶಿಕ್ಷಕರುಗಳಿಗೆ ನಿರಂತರವಾಗಿ ಭಾಷೆಯ ಸೊಗಡು, ವಿಶಿಷ್ಟ ಪದ ಬಳಕೆ,ಗೀತ ರಚನೆಯ ವೈಶಿಷ್ಠ್ಯತೆಯನ್ನು ತಿಳಿಸುತ್ತಾ ಕನ್ನಡ ತಾಯಿಯ ಸೇವೆ ಸಲ್ಲಿಸುತ್ತಿದ್ದಾರೆ.
2019 ರಲ್ಲಿ ನಾಗಠಾಣದಲ್ಲಿ ಜರುಗಿದ ವಿಜಯಪುರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿ ನಿರ್ವಹಣೆಯಲ್ಲಿ ಬಂಡೆಯವರ ಕಾಳಜಿ ಎದ್ದು ಕಾಣುತ್ತದೆ.
ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ 5 ವರ್ಷಗಳಿಂದ “ತಾಯಂದಿರ ಪಾದಪೂಜೆ ಹಾಗೂ ಮಕ್ಕಳಿಗೆ ಕೈತುತ್ತು ಉಣಿಸುವ”ಕಾರ್ಯಕ್ರಮವನ್ನು 500ಕ್ಕಿಂತ ಹೆಚ್ಚು ತಾಯಂದಿರರಿಗೆ ಆಯೋಜಿಸಿ, ಕನ್ನಡ ನೆಲದ ಸಂಸ್ಕøತಿಯ ರೂವಾರಿಯಾಗಿದ್ದಾರೆ.
ನಿಭಾಯಿಸಿದ ಹುದ್ದೆಗಳುಃ 1)ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಸಹ ಕಾರ್ಯದರ್ಶಿ, 2)ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆಯ ಅಧ್ಯಕ್ಷ, 3)ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ, 4)ಕ್ರೀಡಾ ಮತ್ತು ಸಾಂಸ್ಕೃತಿಕ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ಪ್ರಶಸ್ತಿಃ ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ “ಸಿರಿಗನ್ನಡ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ-2020. ಭಾಷಾ ಸಂಕಲ್ಪ:ರಾಜ್ಯದ ಶಿಕ್ಷಕರಲ್ಲಿ ಭಾಷಾ ಪ್ರೌಢಿಮೆ ಗಟ್ಟಿಗೊಳಿಸಿ,ಭಾಷಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಸಾಹಿತ್ಯಕ ಚಟುವಟಿಕೆಗಳನ್ನು ಏರ್ಪಡಿಸಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವದು.