ಸದ್ದಿಲ್ಲದೆ ಸಮಾನತೆಯ ಕನಸು ಸಾಕಾರಗೊಳಿಸುತ್ತಿರುವ ಇಂಚಗೇರಿ ಮಠ ಎಪ್ಪತ್ತು ಮೂರು ವರ್ಷಗಳಲ್ಲಿ ಇಪ್ಪತ್ತು ಸಾವಿರ ಅಂತರ್ಜಾತಿ ವಿವಾಹ !

ನಾಗರಾಜ ಹೂವಿನಹಳ್ಳಿ
ಕಲಬುರಗಿ,ಡಿ.3-ಸವi ಸಮಾಜ ನಿರ್ಮಾಣ ಮಾಡಲು ಬುದ್ಧ, ಬಸವ, ಅಂಬೇಡ್ಕರ್ ಅವರು ಸಾಕಷ್ಟು ಶ್ರಮಿಸಿದ್ದಾರೆ. ಈ ಮಹಾಮಾನವತಾವಾದಿಗಳು ಕಂಡ ಸಮಾನತೆಯ ಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಠ ಒಂದು ಸದ್ದಿಲ್ಲದೆ ಕೆಲಸ ಮಾಡುತ್ತಿದೆ.
ಅದುವೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿ ಮಠ. ದಕ್ಷಿಣ ಭಾರತದ ಶ್ರೇಷ್ಠ ಭಕ್ತಿಪರಂಪರೆಗಳಲ್ಲೊಂದಾದ ಈ ಮಠ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅಹಿರ್ನಿಶಿಯಾಗಿ ದುಡಿಯುತ್ತಿದೆ.
1934ರಲ್ಲಿ ಈ ಮಠದ ಅಧಿಪತ್ಯ ವಹಿಸಿಕೊಂಡ ಮಠದ ಒಡೆಯರಾದ ಮಾಧವಾನಂದ ಪ್ರಭೂಜಿ ಅವರು,ಆಧ್ಯಾತ್ಮಿಕ ಕಾರ್ಯಗಳ ಜೊತೆಗೆ ಅನೇಕ ಸಾಮಾಜ ಸುಧಾರಣಾ ಕಾರ್ಯಗಳನ್ನು ಕೈಗೆತ್ತಿಕೊಂಡರು.
ತಮ್ಮ ಅನುಯಾಯಿಗಳ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದರ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸರ್ವೋದಯ, ಸ್ವದೇಶಿ ವಸ್ತುಗಳ ಬಳಕೆಗೆ ಜನ ಜಾಗೃತಿ, ಗೋ ಹತ್ಯೆ ನಿಷೇಧ, ಭೂದಾನ, ನ್ಯಾಯದಾನ, ಸಾಮೂಹಿಕ ಬೇಸಾಯ, ವಿಧವಾ ವಿವಾಹ ಸೇರಿದಂತೆ ಅನೇಕ ಸಮಾಜ ಸುಧಾರಣೆಯ ಕೆಲಸಗಳನ್ನು ಕೈಗೆತ್ತಿಕೊಂಡರು.
ದೇವದಾಸಿ ಪದ್ಧತಿ ನಿರ್ಮೂಲನೆಗೆ ದೇವದಾಸಿ ಮಹಿಳೆಯರ ವಿವಾಹ ಮತ್ತು ವಿಧವಾ ವಿವಾಹಗಳನ್ನು ಮಾಡಿಸುವುದರ ಮೂಲಕ ದೇವದಾಸಿ ಮಹಿಳೆಯರು, ವಿಧವೆಯರ ಬಾಳಲ್ಲಿ ಹೊಸ ಬೆಳಕು ಮೂಡಿಸಿದರು.
ಇದೆಲ್ಲದಕ್ಕಿಂತ ಹೆಚ್ಚಾಗಿ 1948ರಲ್ಲಿ ಅಂತರ್ಜಾತಿ ವಿವಾಹ ಮಾಡಿಸುವುದರ ಮೂಲಕ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಮುನ್ನುಡಿ ಬರೆದರು. ಒಂದು ಹೆಜ್ಜೆ ಮುಂದೆ ಹೋಗಿ ಅಂತರಧರ್ಮೀಯ ವಿವಾಹಗಳನ್ನು ಮಾಡಿಸುವುದರ ಮೂಲಕ ಸಮ ಸಮಾಜದ ಕನಸನ್ನು ಸಾಕಾರಗೊಳಿಸಿಲು ಅಡಿ ಇಟ್ಟರು. 1948 ರಿಂದ ಇಲ್ಲಿಯವರಗೆಗೆ ಇಂಚಗೇರಿ ಮಠದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳು ನಡೆದಿದ್ದು, ಇಲ್ಲಿ ಅಂತರ್ಜಾತಿ ಮತ್ತು ಅಂತರಧರ್ಮೀಯ ವಿವಾಹವಾದ ದಂಪತಿಗಳು, ಕುಟುಂಬಗಳು ನೆಮ್ಮದಿಯಿಂದ ಜೀವನ ಕಳೆಯುವುದರ ಮೂಲಕ ಸಮ ಸಮಾಜದ ಕನಸನ್ನು ಸಾಕಾರಗೊಳಿಸುತ್ತಿವೆ.
ಮೊದಲ ಅಂತರ್ಜಾತಿ ವಿವಾಹ
1948ರಲ್ಲಿ ಮಾಧವಾನಂದ ಪ್ರಭೂಜಿ ಅವರು ಮಠದಲ್ಲಿದ್ದ ಮರಾಠಾ ಸಮುದಾಯದ ಯುವಕನ ಜೊತೆಗೆ ಗಂಗಾಮತಸ್ಥ ಸಮಾಜದ ಯುವತಿಯ ಅಂತರ್ಜಾತಿ ವಿವಾಹ ಮಾಡಿಸುವುದರ ಮೂಲಕ 12ನೇ ಶತಮಾನದಲ್ಲಿ ಬಸವಣ್ಣನವರು ಕಂಡ ಸಮ ಸಮಾಜದ ಕನಸನ್ನು ಸಾಕಾರಗೊಳಿಸಿದರು.
ಮಾಧವಾನಂದ ಪ್ರಭೂಜಿ ಅವರ ನಂತರ ಬಂದ ಗುರುಪುತ್ರೇಶ್ವರ ಮಹಾರಾಜರು, ಜಗನ್ನಾಥ ವiಹಾರಾಜರು, ಈಗಿನ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಮಹಾರಾಜರು ಅಂತರ್ಜಾತಿ ವಿವಾಹಗಳನ್ನು ಮಾಡುತ್ತ ಬಂದಿದ್ದಾರೆ. 1948 ರಿಂದ ಇಲ್ಲಿಯವರಗೆ ಸುಮಾರು ಇಪ್ಪತ್ತು ಸಾವಿರಕ್ಕಿಂತ ಅಂತರ್ಜಾತಿ ವಿವಾಹಗಳು ನಡೆದಿವೆ.
್ರವಿವಾಹ ನಡೆಯುವುದು ಹೇಗೆ ?
ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯ ಮಂತ್ರ ಮಾಂಗಲ್ಯ ಪದ್ಧತಿಯ ವಿವಾಹಗಳಂತೆ ಈ ಮಠದಲ್ಲಿಯೂ ಸಹ ಅತ್ಯಂತ ಸರಳವಾಗಿ ವಿವಾಹಗಳನ್ನು ನೆರವೇರಿಸಲಾಗುತ್ತದೆ.
ವಧು-ವರರು ಉಟ್ಟ ಬಟ್ಟೆಯ ಮೇಲೆಯೇ ಮಠದಲ್ಲಿರುವ ದೇವಸ್ಥಾನದಲ್ಲಿನ ಗುರುಗಳ ಮೂರ್ತಿಗಳ ಕೊರಳಲ್ಲಿನ ಹೂಮಾಲೆಗಳನ್ನೇ ಬದಲಾಯಿಸಿಕೊಂಡು ಮಠದ ಗುರುಗಳ ಆಶೀರ್ವಾದ ಪಡೆದರೆ ಮುಗಿಯಿತು ಮದುವೆ. ಇಲ್ಲಿಯವರೆಗೆ ಮಠದಲ್ಲಿ ವಿವಾಹವಾದ ದಂಪತಿಗಳು ಯಾವುದೇ ತಂಟೆತಕರಾರುಗಳಿಲ್ಲದೆ ಸುಖಕರ ಜೀವನ ಕಳೆಯುತ್ತಿರುವುದು ವಿಶೇಷವಾಗಿದೆ.
ಹೊರಗಿನವರು ಮಾತ್ರವಲ್ಲ ಮಠದ ಗುರುಗಳೇ ಸ್ವತ: ತಮ್ಮ ಕುಟುಂಬದ ಮಕ್ಕಳ ಮತ್ತು ಮೊಮ್ಮಕ್ಕಳಿಗೆ ಅಂತರ್ಜಾತಿಯ ಮತ್ತು ಅಂತರಧರ್ಮೀಯ ವಿವಾಹ ಮಾಡಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮಾಧವಾನಂದ ಪ್ರಭೂಜಿ ಅವರು ಸ್ವತ: ತಮ್ಮ ಸಹೋದರನ ಮೊಮ್ಮಗಳನ್ನು ಇಸ್ಲಾಂ ಧರ್ಮದ ಯುವಕನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಇಸ್ಲಾಂ ಧರ್ಮದ ಯುವತಿ ಸಿಂಪಿ ಸಮಾಜದ ಯುವಕನ ವರಿಸಿದ್ದಾಳೆ. ಹೀಗೆ ಅನೇಕ ಜನ ಇಲ್ಲಿ ಅಂತರ್ಜಾತಿ ಮತ್ತು ಅಂತರಧರ್ಮೀಯ ವಿವಾಹವಾಗುವುದರ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ.
ಸಮಾನತೆ,ಸರ್ವೋದಯ,ಸಾಮೂಹಿಕ ಬೇಸಾಯ,ಸರಳ ಜೀವನ ಉನ್ನತ ವಿಚಾರಗಳನ್ನು ಮಠದ ಈಗಿನ ಪೀಠಾಧಿಪತಿಗಳಾದ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಮಠ ಎಲ್ಲಿದೆ ?
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿಯಲ್ಲಿ ಈ ಮಠವಿದೆ. ವಿಜಯಪುರ ಜಿಲ್ಲಾ ಕೇಂದ್ರದಿಂದ ಸೊಲ್ಲಾಪುರ ಮಾರ್ಗದಲ್ಲಿ ಸುಮಾರು 30 ಕಿ.ಮೀ. ದೂರದಲ್ಲಿರುವ ಹೊರ್ತಿ ಪಟ್ಟಣದಿಂದ 11.ಕಿಮೀ ದೂರದಲ್ಲಿರುವ ಇಂಚಗೇರಿಯ ನವಗಿರಿಗಳ ನಡುವೆ ಇಂಚಗೇರಿ ಮಠ ಕಂಗೊಳಿಸುತ್ತಿದೆ.
ಆಧ್ಯಾತ್ಮಿಕ ಲೋಕದ ಧೃವತಾರೆಯಂತಿರುವ ಗುರುಲಿಂಗ ಜಂಗಮ ಮಹಾರಾಜರ ಸಾನಿಧ್ಯದಿಂದ ಹೆಸರುವಾಸಿಯಾಗಿರುವ ಈ ಮಠ ಸಪ್ತ ಮಹಾರಾಜರ ಪುಣ್ಯಧಾಮವಾಗಿದೆ. ಭಾವುಸಾಹೇಬ ಮಹಾರಾಜರು, ಐನಾಥ ಪ್ರಭು ಮಹಾರಾಜರು, ಗಿರಿಮಲ್ಲೇಶ್ವರ ಮಹಾರಾಜರು, ಶಿವಪ್ರಭು ಮಹಾರಾಜರು, ಮಾಧವಾನಂದ ಪ್ರಭುಜಿಯವರು, ಗುರುಪುತ್ರೇಶ್ವರ ಮಹಾರಾಜರು, ಜಗನ್ನಾಥ ಮಹಾರಾಜರು ಹಾಗೂ ಸದ್ಯದ ರೇವಣಸಿದ್ದೇಶ್ವರ ಮಹಾರಾಜರು ಇಂಚಗೇರಿ ಮಠದ ಗುರು ಪರಂಪರೆಯಿಂದ ಭಕ್ತಿಯ ನಂದಾದೀಪ ಬೆಳಗುತ್ತಿದ್ದಾರೆ.
ಸಮಾಜಕ್ಕೆ ಮಾದರಿಯಾದ ಹಾಸಿಲಕರ್ ಮನೆತನ
ಕಲಬುರಗಿಯ ಹಾಸಿಲಕರ್ ಕುಟುಂಬ ಇಂಚಗೇರಿ ಮಠದ ಸಂಪ್ರದಾಯವನ್ನು ಅನುಸರಿಸುತ್ತ ಬಂದಿದ್ದು, ಯಾವುದೇ ಜಾತಿ, ಧರ್ಮಕ್ಕೆ ಅಂಟಿಕೊಳ್ಳದೆ ಸಮ ಸಮಾಜದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ.
ಇಂಚಗೇರಿ ಮಠದ ಸಂಪ್ರದಾಯದಂತೆ ಈ ಕುಟುಂಬದಲ್ಲಿ ಸುಮಾರು ಆರು ಜನರು ಅಂತರ್ಜಾತಿಯ, ಒಬ್ಬರು ಅಂತಧರ್ಮೀಯ ವಿವಾಹ ಮಾಡಿಕೊಂಡು ಸುಖಕರ ಜೀವನ ಕಳೆಯುತ್ತಿದ್ದಾರೆ.

ಅಸ್ಪøಶ್ಯತೆ ನಿರ್ಮೂಲನೆಗಾಗಿ ಸರ್ಕಾರ ಏನೆಲ್ಲಾ ಮಾಡುತ್ತಿದೆ. ಆದರೆ ಮಠ ಒಂದು ಕಳೆದ ಹಲವಾರು ವರ್ಷಗಳಿಂದ ಸದ್ದಿಲ್ಲದೆ ಜಾತಿ ವ್ಯವಸ್ಥೆ ನಿರ್ಮೂಲನೆಗೆ ದುಡಿಯುತ್ತ ಸಮ ಸಮಾಜದ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ.

ಈ ವರ್ಷ 12 ಅಂತರ್ಜಾತಿ ವಿವಾಹ
2020 ಜನವರಿಯಿಂದ 2021ರ ನವ್ಹೆಂಬರ್ ವರಗೆ ಇಂಚಗೇರಿ ಮಠದಲ್ಲಿ 12 ಅಂತರ್ಜಾತಿ ವಿವಾಹಗಳಾಗಿವೆ ಎಂದು ಮಠದ ಮೂಲಗಳು ತಿಳಿಸಿವೆ.
(ಆಧಾರ ಮತ್ತು ಮಾಹಿತಿ ಮಠದ ಅಧಿಕೃತ ಮೂಲಗಳು)