ಸದ್ಗುರು ವಾಸ್‌ದೇವ್ ಆರೋಗ್ಯದಲ್ಲಿ ಚೇತರಿಕೆ

ನವದೆಹಲಿ, ಮಾ. ೨೨- ಇತ್ತೀಚೆಗೆ ತುರ್ತು ಮೆದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಈಶಾ ಫೌಂಡೇಷನ್ ಸಂಸ್ಥಾಪಕ ಮತ್ತು ಆಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ಅವರು ಚೇತರಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಈಶಾ ಫೌಂಡೇಷನ್ ತಿಳಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಈಶಾ ಫೌಂಡೇಷನ್, ಸದ್ಗುರು ಅವರ ಚೇತರಿಕೆಗಾಗಿ ಲಕ್ಷಾಂತರ ಜನ ಪ್ರಾರ್ಥನೆ ಸಲ್ಲಿಸಿದ್ದೀರಿ. ಇದಕ್ಕಾಗಿ ನಾವು ನಿಮಗೆ ಆಭಾರಿಗಳಾಗಿದ್ದೇವೆ. ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಈಶಾ ಫೌಂಡೇಷನ್ ಹೇಳಿದೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಮೆದುಳಿಗೆ ರಕ್ಷಾ ಕವಚದಂತಿರುವ ಸ್ನಾಯುವಿನಲ್ಲಿ ರಕ್ತಸಂಗ್ರಹಗೊಂಡಿದ್ದರಿಂದ ಮಾರ್ಚ್ ೧೭ ರಂದು ದೆಹಲಿಯ ಇಂದ್ರಪ್ರಸ್ತ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಮೆದುಳು ಚಿಕಿತ್ಸೆ ನಡೆಸಲಾಗಿತ್ತು. ಈಗ ಸದ್ಗುರು ಚೇತರಿಸಿಕೊಂಡಿದ್ದಾರೆ.
ಕಳೆದ ನಾಲ್ಕು ವಾರಗಳಿಂದ ಸದ್ಗುರು ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ನೋವಿನಲ್ಲೂ ಅವರು ನಿತ್ಯದ ಧ್ಯಾನ, ಜಪ, ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಮಾರ್ಚ್ ೮ ರಂದು ಮಹಾಶಿವರಾತ್ರಿಯಂದು ಕೊಯಮತ್ತೂರಿನ ಈಶಾ ಆಶ್ರಮದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಅವರ ತಲೆನೋವು ಹೆಚ್ಚಾದ ಹಿನ್ನೆಲೆಯಲ್ಲಿ ಮಾ. ೧೫ ರಂದು ಅವರು ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಶಾ ಫೌಂಡೇಷನ್ ಮೂಲಕ ಆಧ್ಯಾತ್ಮಿಕ ಚಟುವಟಿಕೆಗಳ ಜತೆಗೆ ಸದ್ಗುರು ಜಗ್ಗಿ ವಾಸುದೇವ ಅವರು ಮಣ್ಣನ್ನು ರಕ್ಷಿಸಿ ನದಿಗಳನ್ನು ಉಳಿಸುವಂತ ಮುಂತಾದ ಅಭಿಯಾನಗಳನ್ನು ನಡೆಸಿದ್ದಾರೆ.