ಸದ್ಗುಣ, ಸಂಸ್ಕಾರದಿಂದ ಬದುಕು ವಿಕಾಸ

ಲಕ್ಷೇಶ್ವರ,ಮಾ28: ಮನುಷ್ಯನ ಬದುಕು ಧರ್ಮ ಮಾರ್ಗ, ನೈತಿಕ ಮೌಲ್ಯಗಳಿಂದ ವಿಕಾಸಗೊಳ್ಳಬೇಕೇ ಹೊರತು ಅಧರ್ಮ, ಅನ್ಯಾಯದಿಂದ ವಿಕಾರವಾಗಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಪಟ್ಟಣದ ಘಂಟಾಮಠ ಅವರ ನಿವಾಸದ ಅವರಣದಲ್ಲಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಬದುಕು ಶಾಂತ, ಪ್ರಶಾಂತವಾಗಿ ಸಂಸ್ಕೃತಿ, ಸಂಸ್ಕಾರ ಮತ್ತು ಸದ್ಗುಣಗಳಿಂದ ಸಮೃದ್ಧಗೊಳ್ಳಬೇಕು. ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಹೇಗೆ ಅವಶ್ಯವೋ ಹಾಗೆಯೇ ಪರಿಶುದ್ಧ, ಪವಿತ್ರ ಜೀವನ ರೂಪಿತಗೊಳ್ಳಲು ಧರ್ಮ ಪ್ರಜ್ಞೆ ಅಷ್ಟೇ ಅವಶ್ಯ. ಇಂದಿನ ಮನುಷ್ಯನ ಬದುಕು ಹಲವಾರು ಸಂಘರ್ಷಗಳಿಗೆ ಕಾರಣವಾಗುತ್ತಲಿದೆ ಎಂದರು.
ನೀತಿ ಇಲ್ಲದ ಶಾಸನ, ಭೀತಿ ಇಲ್ಲದ ಶಿಕ್ಷಣ, ಸೀಮಾತೀತ ಸ್ವಾತಂತ್ರ್ಯ, ತ್ಯಾಗವಿಲ್ಲದ ಪೂಜೆ, ಶೀಲವಿಲ್ಲದ ಚಾರಿತ್ರ್ಯ, ನೀತಿಹೀನ ವಾಣಿಜ್ಯ, ತತ್ವ-ರಹಿತ ರಾಜಕೀಯ, ದುಡಿಮೆಯಿಲ್ಲದ ಸಂಪತ್ತು, ಆತ್ಮ ಶಾಂತಿಯಿಲ್ಲದ ಭೋಗದಿಂದ ಜೀವನ ನಿರರ್ಥಕಗೊಳ್ಳುವುದು. ವಿಶ್ವಬಂಧುತ್ವ ಸಾರಿದ ವೀರಶೈವ ಧರ್ಮ ಸಂಪುಟದಲ್ಲಿ ಜಾತಿ, ಮತ,ಪಂಥಗಳ ಗಡಿ ಮೀರಿ ಭಾವೈಕ್ಯ, ಸಾರಮಸ್ಯದ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು. ಲಿಂ.ವೀರಗಂಗಾಧರ ಜಗದ್ಗುರುಗಳು ಒತ್ತು ಕೊಟ್ಟಿದ್ದಾರೆ. ಇಂತಹ ದೇವತಾಪುರುಷರು ತೋರಿದ ಧರ್ಮ ಮಾರ್ಗದಲ್ಲಿ ನಾವೆಲ್ಲ ಬಾಳಬೇಕಾಗಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಆನಂದ ಮೆಕ್ಕಿ, ಚನ್ನಪ್ಪ ಕೋಲಕಾರ, ಸಿದ್ದಲಿಂಗಯ್ಯ ಹಿರೇಮಠ, ಚಂಬಣ್ಣ ಬಾಳಿಕಾಯಿ, ಬಸವರಾಜ ಅಂಗಡಿ, ವೀರಣ್ಣ ಪವಾಡದ, ಈರಯ್ಯ ಹಿರೇಮಠ, ಎಂ.ಕೆ. ಕಳ್ಳಿಮಠ, ನಿಂಗಪ್ಪ ಜಾವೂರ, ಎಂ.ಬಿ. ಹೊಸಮನಿ, ಬಸವರಾಜ ಉಮಚಗಿ, ಹಿರೇಮಠ, ಲಕ್ಕುಂಡಿಮಠ, ಎನ್.ವಿ. ಹೇಮಗಿರಿಮಠ, ವಿಜಯ ಆಲೂರ, ಸಂತೋಷ ರೋಣದ, ಲಲಿತಾ ಕೆರಿಮನಿ, ಜಯಶ್ರೀ ಕೋಲಕಾರ, ವಿಜಯಲಕ್ಷ್ಮೀ, ಬಾಳಿಕಾಯಿ, ಎಸ್.ಬಿ. ಅಣ್ಣಿಗೇರಿ ಇತರರಿದ್ದರು.