ಸದೃಢ ಸರ್ಕಾರಕ್ಕಾಗಿ ಬಹುಮತ ಕೊಡಿ: ಸಿ.ಟಿ.ರವಿ

ಮೈಸೂರು: ಏ.25:- ಸದೃಢ ಸರ್ಕಾರಕ್ಕಾಗಿ ನಮಗೆ ಬಹುಮತ ಕೊಡಿ. ಸ್ಪಷ್ಟ ಬಹುಮತ, ಸದೃಢ ಸರ್ಕಾರ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಮೈಸೂರಿನ ಬಿಜೆಪಿ ಮಾದ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ, ನಾಳಿದ್ದು ಮಹಾಪ್ರಚಾರ ಅಭಿಯಾನದಲ್ಲಿ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಭಾಗವಹಿಸುತ್ತಾರೆ. ರಾಜ್ಯದಿಂದ ಪ್ರಾರಂಭವಾಗಿ ಬೂತ್ ಹಂತದವರೆಗೆ 224 ಕ್ಷೇತ್ರದಲ್ಲೂ ಪ್ರಚಾರ ಮಾಡಲಿದ್ದಾರೆ. 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಈ ಪ್ರಚಾರ ಅಭಿಯಾನ ಮಾಡಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್, ನಿರ್ಮಲ ಸೀತಾರಾಮ್, ಗುಜರಾತ್ ಸಿಎಂ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ನಾಯಕರಾದ ದೇವಂದ್ರ ಫಡ್ನವೀಸ್ ಸೇರಿ ಅನೇಕರು ಪ್ರಚಾರ ನಡೆಸಲಿದ್ದಾರೆ ಎಂದರು.
ಕಾರ್ಯಕರ್ತರೇ ಬೆಳೆಸಿದ ಪಕ್ಷವಾಗಿ ಶಕ್ತಿ ಕೇಂದ್ರ ಹಾಗೂ ಅದರ ಮೇಲ್ಪಟ್ಟ, ವ್ಯಕ್ತಿಗತ ಅಹವಾಲು, ಜಿಲ್ಲಾ ಹಾಗೂ ರಾಜ್ಯ ಕೋರ್ ಕಮಿಟಿ ಸಮಾಲೋಚನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. 70ಕ್ಕೂ ಹೆಚ್ಚು ಹೊಸ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟಿದ್ದೇವೆ. ಹಳೆ ಬೇರು ಹೊಸ ಚಿಗುರಿನ ಜತೆಗೆ ಹೊಸ ಪ್ರಯೋಗಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ 12ಮಂದಿ ಮಹಿಳೆಯರು, 34 ಹಿಂದುಳಿದ ವರ್ಗ, 38 ಎಸ್ಟಿ ಸೇರಿ ಎಲ್ಲಾ ಸಮುದಾಯಕ್ಕೂ ರಾಜಕೀಯ ಅವಕಾಶ ಕಲ್ಪಿಸಿದ್ದೇವೆ. ಆ ಮೂಲಕ ಸಾಮಾಜಿಕ ನ್ಯಾಯವನ್ನು ಮಾತಿನಲ್ಲಿ ಹೇಳದೇ ಆಚರಣೆಗೂ ತಂದಿದ್ದೇವೆಂದರು.
ಒಳ ಮೀಸಲಾತಿ ಫೈಲ್ ತೆಗೆದುಕೊಂಡು ಹೋದಾಗ ಸಿದ್ದರಾಮಯ್ಯ ಆಚೆಗೆ ಎಸೆದಿದ್ದರೆಂದು ಸಿದ್ದರಾಮಯ್ಯರ ಆಪ್ತ ಆಂಜನೇಯ ಅವರೇ ಹೇಳಿಕೊಂಡಿದ್ದಾರೆ. ಮೀಸಲಾತಿಗೆ ಕೈ ಹಾಕಿದರೆ ಜೇನೂಗುಡಿಗೆ ಕೈ ಹಾಕಿದಂತೆ ಯಾರು ಅಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ, ಬಿಜೆಪಿ ಅದನ್ನು ಯಶಸ್ವಿಯಾಗಿ ನಡೆಸಿದೆ. ಡಿ.ಕೆ.ಶಿವಕುಮಾರ್ ನಮ್ಮ ಸರ್ಕಾರ ಬಂದರೆ ಮೀಸಲಾತಿ ವಾಪಾಸ್ ಪಡೆದು ಕೊಡುವುದಾಗಿ ಹೇಳಿದ್ದಾರೆ. ಆದರೆ, ಯಾರ ಮೀಸಲಾತಿ ವಾಪಾಸ್ ಪಡೆಯುತ್ತೀರಿ? ದಲಿತರು, ಲಿಂಗಾಯತರು, ಒಕ್ಕಲಿಗರು ಹಾಗೂ ಹಿಂದುಳಿದ ಸಮುದಾಯದ ಒಳ ಮೀಸಲಾತಿಯನ್ನು ವಾಪಾಸ್ ಪಡೆಯುತ್ತೀರಾ ಎಂಬುದನ್ನು ಈಗಲೇ ಸ್ಪಷ್ಟಪಡಿಸಿ ಎಂದು ಆಗ್ರಹಿಸುತ್ತೇನೆಂದರು.
ಮೈತ್ರಿ ಸರ್ಕಾರ ಬರಲ್ಲಾ, ಬಿಜೆಪಿ ಸರ್ಕಾರ ಬರುವುದು ನಿಶ್ಚಿತವಾಗಿದೆ. ಮೀಸಲಾತಿ ನೀಡಿ ಸಮುದಾಯ ಒಡೆದಿದ್ದಾರೆಂಬುದು ಆರೋಪವಷ್ಟೇ ಒಡೆಯೋದು ಕಾಂಗ್ರೆಸ್‍ನ ಹಳೆ ಚಾಳಿಯಾಗಿದೆ. ಭಾರತ ಮತ್ತು ಪಾಕಿಸ್ತಾನವಾಗಿ ದೇಶ ಒಡೆದಿದ್ದಾರೆ. ಸಮುದಾಯಗಳ ನಡುವಿನ ಒಗ್ಗಟ್ಟಿನ ಡ್ಯಾಂ ಒಡೆಯಲ್ಲಿಕೆ ಪ್ರಯತ್ನ ಮಾಡಿದ್ದಿರಿ ಎಂಬುದು ಗೊತ್ತಿತ್ತು.
ಆದರೆ, ಕೆಂಪೇಗೌಡ ಪ್ರತಿಮೆ, ಬಸವಣ್ಣನವರ ಮಂಟಪ ಹೀಗೆ ಎಲ್ಲರ ಭಾವನೆಗೂ ಬೆಲೆ ಕೊಟ್ಟು ಹಿಂದೂತ್ವದೊಳಗೆ ಎಲ್ಲರನ್ನೂ ಸೇರಿಸಿದ್ದೇವೆ. ಹೀಗಾಗಿ ಈ ಬಾರಿ ಕಾಂಗ್ರೆಸ್‍ನ ಡ್ಯಾಂ ಮುಳುಗುವುದು ನಿಶ್ಚಿತವಾಗಿದೆ. ಎಡಗೈ ಹಾಗೂ ಬಲಗೈನಲ್ಲಿ ಒಳ ಮೀಸಲಾತಿ ಕೊಡುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ರೈತರಿಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲ ಸೇರಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಪಕ್ಷದ ನೀತಿ, ನೇತೃತ್ವ ಹಾಗೂ ನಿಯತ್ತಿನ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಮುಸಲ್ಮಾನರೂ ಸಹ ಕಾಂಗ್ರೆಸ್ ಬ್ಯಾಂಕ್‍ನಲ್ಲಿ ಡಿಪಾಸಿಟ್ ಇಟ್ಟು ಬಿಜೆಪಿ ಬ್ಯಾಂಕ್‍ನಲ್ಲಿ ಹಣ ಕೇಳಿದರೆ ಆಗಲ್ಲ.
ಡಿಪಾಸಿಟ್ ಚೆಕ್ ಅನ್ನು ಈ ಬಾರಿ ಬಿಜೆಪಿಗೆ ಬೆಂಬಲಿಸಲು ಅವಕಾಶ ಇದಾಗಿದೆ. ಏಕೆಂದರೆ ಬಿಜೆಪಿ ಇದುವರೆವಿಗೂ ಯಾವುದೇ ಯೋಜನೆಯನ್ನು ಧರ್ಮಕ್ಕೆ ಸೀಮಿತವಾಗಿ ಮಾಡದೇ ಎಲ್ಲರಿಗೂ ನೀಡಿದ್ದೇವೆ. ಹೀಗಾಗಿ ಮುಸ್ಲಿಂ ಮತಗಳು ಬಿಜೆಪಿಗೆ ಬರಲಿವೆ ಎಂದು ಹೇಳಿದರು.
ಸಿದ್ದರಾಮಯ್ಯ ಲಿಂಗಾಯತ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿ, ಸಿದ್ದರಾಮಯ್ಯ ಅವರು ತಮ್ಮ ಅಸಹನೆ, ಆಕ್ರೋಶ ಹೊರ ಹಾಕಿದ್ದಾರೆ. ವರುಣದಲ್ಲಿ ಲಿಂಗಾಯತರು, ಎಸ್‍ಸಿ, ಎಸ್‍ಟಿ ಎಲ್ಲರೂ ಒಂದಾಗಿದ್ದಾರೆ. ಅಲ್ಲಿ ಅಹಿಂದ ಕಾರ್ಡ್ ನಡೆಯುತ್ತಿಲ್ಲ, ಬದಲಿಗೆ ಹಿಂದೂ ಕಾರ್ಡ್ ನಡೆಯುತ್ತಿದೆ ಅನಿಸಿರಬಹುದು. ಭಯಮಿಶ್ರಿತ ಆಕ್ರೋಶವಾಗಿ ಈ ಮಾತು ಬಂದಿದೆ. ಕೋಲಾರ, ವರುಣ ಎರಡರಲ್ಲೂ ಸ್ಪರ್ಧೆ ಮಾಡಬೇಕೆಂಬುದಕ್ಕೆ ಅವಕಾಶ ಸಿಗಲಿಲ್ಲ. ಸದ್ಯ ಸಿದ್ದರಾಮಯ್ಯ ಚಕ್ರವ್ಯೂಹದಲ್ಲಿ ಸಿಲುಕಿರುವ ಅನುಭವ ಆಗಿರಬಹುದು ಎಂದು ವ್ಯಂಗ್ಯವಾಡಿದರು.
ಅವರನ್ನು ಚಕ್ರವ್ಯೂಹದಿಂದ ಬಿಡಿಸಲು ಕೃಷ್ಣ ಅವರ ಜೊತೆ ಇಲ್ಲ ಕೃಷ್ಣ ಬಿಜೆಪಿಯಲ್ಲಿ ಇದ್ದಾರೆ. ಡಿ.ಕೆ.ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಸಿಎಂ ಹುದ್ದೆಗೇರುವುದಾದರೆ ಬಿಟ್ಟು ಕೊಡಲು ಸಿದ್ದರೆಂದಿದ್ದಾರೆ. ಆದರೆ, ಸಿದ್ದರಾಮಯ್ಯರಿಂದ ಅಂತಹ ಹೇಳಿಕೆ ಬಂದಿಲ್ಲ. ಹೀಗಾಗಿ ಡಿಕೆಶಿ ಅವರು ಸಹ ಅವರೊಟ್ಟಿಗಿಲ್ಲ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ತಮ್ಮ ಎಲ್ಲಾ ಅಸ್ತ್ರ ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಶಾಪ ತಟ್ಟದೆ ಬಿಡುವುದಿಲ್ಲ. ಸಿದ್ದರಾಮಯ್ಯರಿಗೆ ತನಗೆ ಸಿಗದಿರುವುದು ಬೇರೆಯವರಿಗೆ ಸಿಗಬಾರದು ಅನ್ನೋ ಮನಸ್ಥಿತಿ ಸಿದ್ದರಾಮಯ್ಯರಿಗಿದೆ. ಖರ್ಗೆ ಡಿ.ಕೆ.ಶಿವಕುಮಾರ್‍ರನ್ನು ಮಾಡುತ್ತಾರೆಂಬ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯಲು ಈ ರೀತಿ ಹೇಳಿರಬಹುದು ಎಂದರು.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆರೋಪ ವಿಚಾರಕ್ಕೆ ಪ್ರತಿಕ್ರಯಿಸಿ, ಇದು ರಾಜಕೀಯ ವ್ಯಭಿಚಾರನಾ?, ಇದನ್ನು ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ರಾಜಕೀಯ ಹಾದರದ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಸಿ.ಟಿ.ರವಿ ಮುಂದಿನ ಸಿಎಂ ಕೂಗು ವಿಚಾರವಾಗಿ ಪ್ರತಿಕ್ರಯಿಸಿ, ಇದು ಕ್ಷೇತ್ರದಲ್ಲಿ ಮಾತ್ರ ಕೇಳುತ್ತಿರುವ ಕೂಗಾಗಿದೆ. ರಾಜ್ಯದಲ್ಲಿ ಎಲ್ಲಾ ಕಡೆ ಈ ಕೂಗು ಕೇಳಿದಾಗ ನಾನು ಸಿಎಂ ಮಾಡುವಂತೆ ಕೇಳುತ್ತೇನೆ. ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಎಂದರು.