ಸದೃಢ ಶಿಕ್ಷಣ ಸಂಸ್ಥೆಯಿಂದ ನಾಗರಿಕರ ಸಬಲೀಕರಣ: ಸಚಿವ ಅಶ್ವತ್ಥ್‌ನಾರಾಯಣ್

ತಿಪಟೂರು, ಜು. ೧೨- ನಾಗರಿಕರು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಕೊಡುಗೆ ನೀಡಬೇಕು. ಹೀಗಾದಾಗ ಶಿಕ್ಷಣ ಸಂಸ್ಥೆಗಳು ಗುಣಮಟ್ಟದಲ್ಲಿ ಮೇಲ್ದರ್ಜೆಗೇರುವ ಜತೆಗೆ ನಾಗರಿಕರ ಸಬಲೀಕರಣವೂ ಸಾಧ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ತಿಪಟೂರು ಸ್ನಾತಕೋತ್ತರ ಕೇಂದ್ರ ಕಲ್ಪಸಿರಿಯ ನಿರ್ಮಾಣಕ್ಕೆ ಹತ್ತಿರದ ರಂಗಾಪುರದಲ್ಲಿ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇಪ್ಪತ್ತೊಂದನೇ ಶತಮಾನವು ಜ್ಞಾನಾಧಾರಿತ ಸಮಾಜವಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಸುಸ್ಥಿರವಾಗಿರಬೇಕೆಂದರೆ ಗುಣಮಟ್ಟ ಮುಖ್ಯ. ಇಂತಹ ಕೇಂದ್ರಗಳು ಸ್ಥಳೀಯವಾಗಿ ಪ್ರತಿಭೆಯನ್ನು ಉತ್ತೇಜಿಸುವ ಜತೆಗೆ ಇಡೀ ದೇಶದೆಲ್ಲೆಡೆಯ ಪ್ರತಿಭೆಗಳನ್ನು ಇಲ್ಲಿಗೆ ಸೆಳೆಯುವ ರೀತಿಯಲ್ಲಿ ಬೆಳೆಯಬೇಕು. ಇದು ಸಾಧ್ಯವಾದಾಗ, ವೈವಿಧ್ಯತೆಯನ್ನು ಉಳಿಸಿಕೊಂಡು ನಮ್ಮತನದ ಛಾಪನ್ನು ಒತ್ತಿದಂತಾಗುತ್ತದೆ ಎಂದು ಅವರು ಹೇಳಿದರು.
ಯಾವ ಜಾಗದಲ್ಲಿ ಗುಣಮಟ್ಟದ ಶಿಕ್ಷಣ ಇರುತ್ತದೋ ಅದು ಸಮೃದ್ಧತೆಯ ತಾಣವಾಗುತ್ತದೆ. ಇಲ್ಲಿ ೧೬ ಎಕರೆ ಕ್ಯಾಂಪಸ್ ತಲೆಯೆತ್ತಲಿದ್ದು, ಎಂ.ಕಾಂ, ಎಂಸಿಎ ಕೋರ್ಸ್‌ಗಳು ಇರಲಿವೆ. ಜಿಲ್ಲೆಯ ಬಿದರೆಕಟ್ಟೆಯಲ್ಲಿ ೪೪ ಕೋಟಿ ವೆಚ್ಚದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಕಾರ್ಯ ನಡೆದಿದೆ. ಸಿರಾದಲ್ಲಿ ಪಿ.ಜಿ. ಕೇಂದ್ರ ಕಾರ್ಯಾಚರಿಸುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ತುಮಕೂರು ವಿ.ವಿ.ಯಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಒಟ್ಟು ೭೦ ಎಕರೆ ವಿಸ್ತೀರ್ಣದಲ್ಲಿರುವ ತುಮಕೂರು ವಿ.ವಿ.ಯು ಈಗ ನ್ಯಾಕ್ ಬಿ+ ಶ್ರೇಣಿಯಲ್ಲಿದ್ದು, ಎ+ ಶ್ರೇಣಿಗೆ ಏರಬೇಕು. ಅದೇ ರೀತಿ ಎನ್.ಐ.ಆರ್.ಎಫ್. ಶ್ರೇಯಾಂಕದಲ್ಲಿ ಈಗ ೧೫೦ ರಿಂದ ೨೦೦ರ ಒಳಗಿದ್ದು, ಇದು ಇನ್ನಷ್ಟು ಮೇಲಕ್ಕೆ ಬರಬೇಕು ಎಂದರು.
ತುಮಕೂರು ವಿ.ವಿ. ದೇಶದ ಎಲ್ಲಾ ಭಾಗದವರೂ ಓದಲು ಬಯಸುವಂತಹ ಶೈಕ್ಷಣಿಕ ತಾಣವಾಗಬೇಕು ಎಂದು ಆಶಿಸಿದರು.
ಸದ್ಯ ತಾಂತ್ರಿಕತೆಯು ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈಗ ರಾಜ್ಯದ ಯಾವುದೇ ಗ್ರಾಮದ ವಿದ್ಯಾರ್ಥಿ ಯುಯುಸಿಎಂಎಸ್ (ಯುನಿಫೈಡ್ ಯುನಿವರ್ಸಿಟಿ ಅಂಡ್ ಕಾಲೇಜ್ ಮ್ಯಾನೇಜ್ ಮೆಂಟ್ ಸಿಸ್ಟಂ) ಬಳಸಿ ತಾನಿರುವ ಸ್ಥಳದಿಂದ ರಾಜ್ಯದ ಯಾವುದೇ ಕಾಲೇಜಿಗೆ ಬೇಕಾದರೂ ಅರ್ಜಿ ಹಾಕಬಹುದು. ವಿದ್ಯಾರ್ಥಿಗಳ ಅಂಕಪಟ್ಟಿ ಸೇರಿದಂತೆ ೪೩ ವರ್ಷಗಳ ಶೈಕ್ಷಣಿಕ ದಾಖಲೆಗಳು ಡಿಜಿ ಲಾಕರ್ ನಲ್ಲಿರುವುದರಿಂದ ಕುಳಿತ ಜಾಗದಿಂದಲೇ ಶೈಕ್ಷಣಿಕ ದಾಖಲಾತಿಗಳನ್ನು ಅರ್ಜಿಗೆ ಲಗತ್ತಿಸಬಹುದು ಎಂದರು.
ಸರ್ಕಾರವು ೨೨ ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆ ಜಾರಿಗೊಳಿಸುವ ಉದ್ದೇಶ ಹೊಂದಿದೆ. ಇದಕ್ಕೆ ಮುಂಚೆ ೨೦೦೦ನೇ ಇಸವಿಯಲ್ಲಿ ಕರ್ನಾಟಕ ಸ್ಟೇಟ್ ಯೂನಿವರ್ಸಿಟಿ ಕಾಯ್ದೆ ತರಲಾಗಿತ್ತು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎಲ್‌ಎಂಎಸ್ (ಲನಿಂಗ್ ಮ್ಯಾನೇಜ್ ಮೆಂಟ್) ಸಿಸ್ಟಂ, ಸ್ಮಾರ್ಟ್ ಕ್ಲ್ಯಾಸ್ ರೂಮ್ ಸೇರಿದಂತೆ ಹಲವು ಉಪಕ್ರಮಗಳಿಗೆ ಚಾಲನೆ ಕೊಡಲಾಗಿದೆ. ಯಾವುದೇ ಕಾಲೇಜಿನಲ್ಲಿ ಬೋಧಕರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರೀತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದರು.
ವಿಶ್ವವಿದ್ಯಾಲಯಗಳು ಕೇವಲ ಪದವಿ ಕೊಡುವುದಷ್ಟೇ ಅಲ್ಲ, ಬದುಕಿಗೆ ಅಗತ್ಯವಾಗಿ ಬದುಕಿಗೆ ಬೇಕಾದ ಜ್ಞಾನವನ್ನು ನೀಡಬೇಕು. ಆ ಕೆಲಸವನ್ನು ೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಯಾವ ವಿದ್ಯಾರ್ಥಿಗೆ ತಾನು ಏನು ಕಲಿಯಬೇಕು ಎಂದು ಇಚ್ಚಿಸುತ್ತಾನೋ ಅಂತಹ ಶಿಕ್ಷಣವನ್ನು ನೀಡಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದ್ದು, ಹೆಚ್ಚು ವಿದ್ಯಾರ್ಹತೆ ಹೊಂದಿರುವವರಲ್ಲೇ ನೈತಿಕ ಶಿಕ್ಷಣದ ಕೊರತೆಯಿರುವುದನ್ನು ಕಾಣುತ್ತಿದ್ದೇವೆ. ಅದನ್ನು ಹೋಗಲಾಡಿಸಿ ನಮ್ಮ ರಾಷ್ಟ್ರದ ಬಗ್ಗೆ ಗೌರವ ಮತ್ತು ಸಂಸ್ಕೃತಿಯ ಬಗ್ಗೆ ಯೋಚಿಸುವಂತಹ ಶಿಕ್ಷಣ ಎನ್‌ಇಪಿಯ ಧ್ಯೇಯವಾಗಿದೆ ಎಂದರು.
ಇಂದು ಶಿಕ್ಷಿತರಲ್ಲೇ ಅತಿ ಹೆಚ್ಚು ಆತ್ಮಹತ್ಯೆಯ ಪ್ರಕರಣಗಳು ಕಂಡು ಬರುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಜೀವನದ ಉದ್ದೇಶವನ್ನು ಕಟ್ಟಿಕೊಡುವ ಕೆಲಸವನ್ನು ಮಾಡಲಾಗಿದೆ ಎಂದರು.
ಸಚಿವರು ಇದಕ್ಕೂ ಮುನ್ನ ತಿಪಟೂರು ಪಟ್ಟಣದಲ್ಲಿ ಪದವಿ ಕಾಲೇಜಿಗೆ ಭೇಟಿ ಕೊಟ್ಟು, ಅಲ್ಲಿ ನಿರ್ಮಾಣ ಹಂತದಲ್ಲಿರುವ ಕಾಲೇಜು ಕಟ್ಟಡವನ್ನು ಪರಿಶೀಲಿಸಿ ಆಗಿರುವ ಪ್ರಗತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತುಮಕೂರು ವಿ.ವಿ. ಕುಲಪತಿ ಪ್ರೊ.ಕೇಶವ, ಸಿಂಡಿಕೇಟ್ ಸದಸ್ಯರಾದ ರಾಜು, ಟಿ.ಎಸ್.ಸುನಿಲ್ ಪ್ರಸಾದ್, ಕುಲಸಚಿವ ಪ್ರೊ. ನಿರ್ಮಲ್ ರಾಜು, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.