ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿ: ಹೊರಟ್ಟಿ

ಧಾರವಾಡ, ಸೆ.6: ಸದೃಡ, ಸುಸಂಸ್ಕøತ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬ ಶಿಕ್ಷಕರು ಸಮರ್ಪಣಾ ಭಾವದಿಂದ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಹಾಲಿ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಕರ ದಿನೋತ್ಸವ ಸಮಿತಿಯ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಸರ್ಕಾರಗಳು ಶಿಕ್ಷಕ ಸಮುದಾಯ ನೆಮ್ಮದಿ, ಸುಖ, ಸಂತೋಷದಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಮೂಡಿಸಬೇಕು. ಅವರಿಗೆ ಸಿಗುವ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡಬೇಕೆಂದು ಅಚರು ಹೇಳಿದರು.
ರಾಜ್ಯದಲ್ಲಿ 90 ಸಾವಿರ ಡಿ,ಎಡ್, 32 ಸಾವಿರ ಬಿ.ಎಡ್,12 ಸಾವಿರ ಎಮ್.ಪಿಎಡ್,ಬಿಪಿಎಡ್ ಪದವಿಧರರು ನಿರುದ್ಯೋಗಿಗಳಾಗಿದ್ದಾರೆ. ಇಂತದರಲ್ಲಿ ತಾವು ಶಿಕ್ಷಕ ವೃತ್ತಿಗೆ ಸೇರಿ, ಸೇವೆ ಸಲ್ಲಿಸುತ್ತಿರುವುದು ಸುದೈವ. ಆದ್ದರಿಂದ ಎಲ್ಲ ಶಿಕ್ಷಕರು ಗುಣಮಟ್ಟದ ಮತ್ತು ನೈತಿಕ ಶಿಕ್ಷಣಕ್ಕೆ ಮತ್ತು ನೂತನ ಕೌಶಲ್ಯಗಳಿಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲೆ ಎನ್.ಕೆ.ಸಾವುಕಾರ, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ರವಿಕುಮಾರ ಬಾರಾಟಾಕೆ, ಜಿಲ್ಲಾ ಉಪ ಸಮನ್ವಯಾಧಿಕಾರಿ ಎಸ್.ಎಂ.ಹುಡೆದಮನಿ, ಗಿರೀಶ ಮಠಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಯು.ಎಫ್.ಚುಳಕಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಪ್ರೌಡಶಾಲಾ ಸಹಶಿಕ್ಷಕರ ಅಧ್ಯಕ್ಷ ಎಫ್.ವ್ಹಿ.ಮಂಜನ್ನವರ, ಕಾರ್ಯದರ್ಶಿ ಬಿ.ಜಿ.ಬಸೆಟ್ಟಿ, ತಾಲೂಕಾ ಅಧ್ಯಕ್ಷೆ ಶಾಂತಾ ಶೀಲವಂತರ ಸೇರಿದಂತೆ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳು, ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.