ಸದೃಢ ರಾಷ್ಟ್ರ ನಿರ್ಮಾಣಕ್ಕೆ ಯುವಶಕ್ತಿಯ ಸದ್ಭಳಕೆ ಅಗತ್ಯ

ಕಲಬುರಗಿ.ಜ.12: ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ತುಂಬಾ ಪ್ರಮುಖವಾಗಿದೆ. ಇಂತಹ ಯುವಶಕ್ತಿ ಅನೇಕ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಸಮಯ ಮತ್ತು ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧನೀಯವಾಗಿದೆ. ಯುವಕರಿಗೆ ಸೂಕ್ತವಾದ ಮಾರ್ಗದರ್ಶನ, ಮೌಲ್ಯಗಳು, ಸಂಸ್ಕಾರವನ್ನು ನೀಡಿ, ಅವರ ಶಕ್ತಿಯನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆಯೆಂದು ಜೇವರ್ಗಿ ಪಿಎಸ್‍ಐ ಸಂಗಮೇಶ ಅಂಗಡಿ ಅಭಿಪ್ರಾಯಪಟ್ಟರು.
ಅವರು ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಮಂಗಳವಾರ ಜರುಗಿದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ‘ರಾಷ್ಟ್ರೀಯ ಯುವಕರ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದೀನ್ ಸಾಗರ ಮಾತನಾಡಿ, ವಿವೇಕಾನಂದರವರು ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು. ಭಾರತದ ಭವ್ಯ ಸಂಸ್ಕøತಿ, ಪರಂಪರೆ, ಇತಿಹಾಸವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದರು. ಸಮಾಜದಲ್ಲಿರುವ ಬಡವ, ಅಶಕ್ತರ ಏಳ್ಗೆಗಾಗಿ ಶ್ರಮಿಸಿದರು. ಯುವ ಸಮೂಹವು ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ವಿದ್ಯಾರ್ಥಿ ದೆಸೆಯಿಂದಲೇ ನಿಗದಿತ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆಯೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಿಬಿಸಿ ಉಪಾಧ್ಯಕ್ಷ ರವಿ ಕೋಳ್ಕುರ, ಉಪನ್ಯಾಸಕರಾದ ರವಿಕುಮಾರ ಬಟಗೇರಿ, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಸಿಬ್ಬಂದಿ ನೇಸರ ಬೀಳಗಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.