ಸದೃಢ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ತರ

ತುಮಕೂರು, ಜ. ೧೪- ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಯುವಶಕ್ತಿ ಏಕಾಗ್ರತೆಯಿಂದ ಶಕ್ತಿಮೀರಿ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ ನೀಡಿದರು.
ನಗರದ ಬೆಳಗುಂಬದಲ್ಲಿ ವಿವೇಕಾನಂದ ರೈಫಲ್ ಶೂಟಿಂಗ್ ಅಕಾಡೆಮಿ, ವಿವೇಕಾನಂದ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಯುವದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಾಧನೆಗೆ ಗುರಿ, ಏಕಾಗ್ರತೆ ಮುಖ್ಯ. ಪರಿಶ್ರಮ, ನಿಷ್ಕಲ್ಮಶವಾಗಿದ್ದರೆ ಸಾಧನೆಯ ಶಿಖರ ಏರಬಹುದು. ಅಂಥ ಕಾರ್ಯಕ್ಕೆ ತ್ಯಾಗ, ಬಲಿದಾನಗಳು ಮುಖ್ಯವಾಗುತ್ತವೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಯುವಶಕ್ತಿ ತಳಹದಿಯ ಮೇಲೆ ಭಾರತದ ಅಭ್ಯುದಯ ಇದೆ. ದೈಹಿಕ, ಮಾನಸಿಕ ಸದೃಢತೆಯಿಂದ ಯುವಶಕ್ತಿ ಸಮಾಜಮುಖಿ ದೇಶ ಕಟ್ಟಬೇಕು. ರೈಫಲ್ ಶೂಟಿಂಗ್ ಮಾಡುವಲ್ಲಿ ಪರಿಣತಿ, ಶ್ರದ್ಧೆ ಇದ್ದರೆ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗಳಿಸಬಹುದು ಎಂದರು.
ರಾಮಕೃಷ್ಣ-ವಿವೇಕಾನಂದಾಶ್ರಮದ ಶ್ರೀ ಸ್ವಾಮಿ ಧೀರಾನಂದಜಿ ಸರಸ್ವತಿ ಮಾತನಾಡಿ, ಯುವಜನರಲ್ಲಿ ಸಮಾಜ ಹೆಚ್ಚು ಭರವಸೆ ಇಟ್ಟುಕೊಂಡಿದೆ. ಗಾಂಧೀಜಿ, ಸುಭಾಶ್‌ಚಂದ್ರಬೋಸ್ ಸೇರಿದಂತೆ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದ್ದ ಸ್ವಾಮಿ ವಿವೇಕಾನಂದರು ಶಕ್ತಿಯೆ ಜೀವನ, ದೌರ್ಬಲ್ಯವೆ ಮರಣ ಎಂದು ಹೇಳಿದ್ದರು. ಆದ್ದರಿಂದ ಯುವಶಕ್ತಿ ಕ್ರಿಯಾಶೀಲವಾಗಿ ದೇಶವನ್ನು ಕಟ್ಟಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಮತ್ತು ಕವಿ ಕರ್ನಲ್ ಎನ್.ಹೆಚ್. ಮಹೇಶ್ವರ್, ಹಿರಿಯ ಸಹಕಾರಿ ಎನ್.ಎಸ್. ಜಯಕುಮಾರ್, ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾಪಟು ಮಂಜುನಾಥ್ ಪಾಟೇಗರ್, ಡಾ. ವಿನಯಬಾಬು, ಕೆಎಸ್‌ಆರ್‌ಪಿ ಕಮಾಂಡಿಂಗ್ ಯುವಕುಮಾರ್, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ್, ರಾಜ್ಯ ರೈಫಲ್ ಅಸೋಸಿಯೇಷನ್ ಕಾರ್ಯದರ್ಶಿ ಬಿ. ಸುಶೀಲ್ ಮತ್ತಿತರರು ಉಪಸ್ಥಿತರಿದ್ದರು.