ಸದೃಢ ದೇಹ ಸದೃಢ ಆರೋಗ್ಯ ಮುಖ್ಯ


ಸಂಜೆವಾಣಿ ವಾರ್ತೆ
ಕೊಟ್ಟೂರು, ನ.28: ವಿದ್ಯಾರ್ಥಿಗಳಿಗೆ  ಸದೃಢ ದೇಹ, ಸದೃಢ ಆರೋಗ್ಯ ಮುಖ್ಯ, ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ನೀಡಬೇಕು, ಇದರ ಜೊತೆಗೆ ಕನ್ನಡ ಭಾಷೆಯನ್ನು ಉಳಿಸುವಲ್ಲಿ  ಶ್ರಮಿಸಬೇಕು ಎಂದು ಕೂಡ್ಲಿಗಿಯ ಶಾಸಕರಾದ ಎನ್‌ಟಿ ಶ್ರೀನಿವಾಸ್ ತಿಳಿಸಿದರು.  
ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಸಾವಜ್ಜಿ ಗುರುಸಿದ್ದನಗೌಡ್ರು ಸುಮಂಗಲಮ್ಮನವರ  ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಾಗೂ ಎಸ್ ವಿ ಎಸ್ ಬಿ ಪ್ರೌಢಶಾಲೆ ವತಿಯಿಂದ ಕನ್ನಡ ಹಬ್ಬ ಹಾಗೂ ಕನ್ನಡ ತೇರು ಎಳೆಯೋಣ ಬಾರ ಎಂಬ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಇಸ್ರೋ ವಿಜ್ಞಾನಿ ಗೋವಿಂದರಾಜ್ ಮಾತನಾಡಿ ವಿಜಯನಗರ ಜಿಲ್ಲೆಯಲ್ಲಿ ಇಬ್ಬರು ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ನಾವುಗಳು ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇವೆ,  ಕನ್ನಡ ಮಾಧ್ಯಮದಲ್ಲಿ ಓದಿದ 80ರಷ್ಟು ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಚಂದ್ರಯಾನ ತ್ರಿ ಯಶಸ್ವಿಯಾದ ನಂತರ ನಾವು ಸೂರ್ಯನ ಕಡೆ ನೋಟ ನೋಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಗಗನಯಾನ ಯೋಜನೆಯನ್ನು ರೂಪಿಸಲು ಎಲ್ಲಾ ಕಾರ್ಯಗಳನ್ನು ಮಾಡಲಾಗಿದೆ. 2030ರ ಒಳಗಾಗಿ ಮಾನವ ಸಹಿತ ಚಂದ್ರಯಾನಕ್ಕೆ ಹೋಗಲು ಸಾಧ್ಯವಾಗಬಹುದು  ಎಂದು ತಿಳಿಸಿದರು.
ಈ ಕಾರ್ಯಕ್ರಮ ಅಧ್ಯಕ್ಷತೆ ಎಸ್ ಮಂಜುನಾಥ್ ವಹಿಸಿದ್ದರು. ಬಸಮ್ಮ ಪ್ರಾರ್ಥನೆ  ನೆರೆವೇರಿಸಿದರು, ಬಸವರಾಜ ಗುಪ್ತ ಸ್ವಾಗತಿಸಿದರು. ಅಶ್ವಿನಿ ಮತ್ತು ಕಾವ್ಯ ನಿರೂಪಿಸಿದರು. ಪ್ರಸ್ತಾವಿಕವಾಗಿ ಶಿಕ್ಷಕರರಾದ ಸೋಮಶೇಖರ್ ನುಡಿದರು. ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿವೃತ್ತ ಯೋಧ ಹನುಮನಗೌಡ ಅವರಿಗೆ ಹಾಗೂ ಇಸ್ರೋ ವಿಜ್ಞಾನಿಯಾದ ಗೋವಿಂದರಾಜ್ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವಿಶಾಲಾಕ್ಷಿ ಪರಸಪ್ಪ, ಸದಸ್ಯರಾದ ಯಶವಂತ್ ಗೌಡ, ಕೊಟ್ರಮ್ಮ ಹಾಗೂ ಮಂಜುನಾಥ ಶೆಟ್ಟಿ, ಗುರುಸಿದ್ಧನ ಗೌಡ್ರು, ಶಶಿಧರ್ ಇಸಿಒ ಆನಂದ ದೇವರ ಕೊಳ್ಳದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮುಂಚೆ ವಿದ್ಯಾರ್ಥಿಗಳು ಎತ್ತಿನ ಗಾಡಿಯ  ಮೇಲೆ ಮಿನಿ ರಥವನ್ನು ನಿರ್ಮಿಸಿ ಅದರೊಳಗೆ ಭುವನೇಶ್ವರಿಯ ದೇವಿಯನ್ನು ಅಳವಡಿಸಿ ಪೂಜೆಯನ್ನು ಸಲ್ಲಿಸಿ ಗ್ರಾಮದಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆಯನ್ನು ಕೈಗೊಂಡರು. ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳನ್ನು ಧರಿಸಿ ನೋಡುಗರ ಗಮನ ಸೆಳೆದರು.