ಸದೃಢ ದೇಶ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ಖೂಬಾ

ಬೀದರ್: ಆ.1:’ದೇಶ ಉಳಿದರೆ ಧರ್ಮವೂ ಉಳಿಯುತ್ತದೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಲಿಂಗಾಯತ ಮಹಾಮಠದ ವತಿಯಿಂದ ನಗರದ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ನಡೆದ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯ 75 ಗ್ರಾಮಗಳಲ್ಲಿ ನಡೆಸಿದ ಸ್ವಾತಂತ್ರ್ಯೋತ್ಸವ ಸಂಭ್ರಮ ಮತ್ತು ಗುರುವಚನ ಪ್ರವಚನ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಧರ್ಮದ ಹೆಸರಿನಲ್ಲಿ 1947ರಲ್ಲಿ ದೇಶ ವಿಭಜನೆ ಮಾಡಿದ್ದು ನೋವಿನ ಸಂಗತಿ. ಸ್ವಾತಂತ್ರ್ಯ ಹೋರಾಟಗಾರರು ಕರಾಳ ದಿನಗಳನ್ನು ಎದುರಿಸಿ ತಮ್ಮ ಪ್ರಾಣ ಬಲಿದಾನ ಮಾಡಿ ಸ್ವಾತಂತ್ರ್ಯ ತಂದು ಕೊಟಿದ್ದಾರೆ’ ಎಂದು ತಿಳಿಸಿದರು.

‘ಇಂದು ಜಗತ್ತಿನಲ್ಲಿ ದುರ್ಬಲರ ಮೆಲೆ ಪ್ರಬಲರು ದಾಳಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸುವ ದಿಸೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ಯುವಕರು ಸ್ವಾರ್ಥ ಬಿಟ್ಟು ದೇಶ ಪ್ರೇಮಿಗಳಾಗಬೇಕು. ಧರ್ಮವಂತರಾಗಬೇಕು. ಅಕ್ಕ ಅನ್ನಪೂರ್ಣ ಅವರು 75 ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಪ್ರಶಂಸನೀಯ ಎಂದು ಹೇಳಿದರು.

ಲಿಂಗಾಯತ ಮಹಾಮಠದ ಪ್ರಭುದೇವರು ನೇತೃತ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ, ಕರ್ನಲ್ ಶರಣಪ್ಪ ಸಿಕೇನಪುರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಕಾಂಗ್ರೆಸ್ ಯುವ ಮುಖಂಡ ಆನಂದ ದೇವಪ್ಪ, ವಿರೂಪಕ್ಷ ಗಾದಗಿ, ಬಸವಕುಮಾರ ಪಾಟೀಲ, ಚಂದ್ರಶೇಖರ ಹೆಬ್ಬಾಳೆ, ರೇವಣಸಿದ್ದಪ್ಪ ಜಲಾದೆ, ಮಡಿವಾಳಪ್ಪ ಮಂಗಲಗಿ, ರಾಜುಕೋಟೆ, ಸಜಾನಂದ ಕಂದಗೂಳೆ, ಜಯರಾಜ ಖಂಡ್ರೆ, ಅಶೋಕ ಎಲಿ, ವಿವೇಕ ವಾಲಿ ಹಾಗೂ ಭರತ ಕಾಂಬ್ಳೆ ಇದ್ದರು.

ಮಾಣಿಕಪ್ಪ ಗೊರನಾಳೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು. ಬೆಳಿಗ್ಗೆ ಸಿಂಧೋಲ್ ಕಲ್ಯಾಣ ಮಂಟಪದಿಂದ ರಂಗ ಮಂದಿರದವರೆಗೆ ರಾಷ್ಟ್ರಧ್ವಜ ಹಾಗೂ ಧರ್ಮ ಧ್ವಜ ಹೊತ್ತ 75 ಬೈಕ್‍ಗಳು ಹಾಗೂ 75 ಕಾರುಗಳÀ ರ್ಯಾಲಿ ನಡೆಯಿತು.