ಸದೃಢ ಆರೋಗ್ಯಕ್ಕಾಗಿ ನಿಯಮಿತ ನಡಿಗೆ ಅಗತ್ಯ

ಕಲಬುರಗಿ: ಏ.3:ಇತ್ತೀಚಿನ ಒತ್ತಡದ ಬದುಕಿನ ದಿನಗಳಲ್ಲಿ ಆರೋಗ್ಯದತ್ತ ಗಮನಹರಿಸುವುದು ಕಡಿಮೆಯಾಗಿದೆ. ಇದರಿಂದ ಸಣ್ಣ ವಯಸ್ಸಿನಲ್ಲಿಯೇ ಬಿ.ಪಿ, ಸುಗರ್, ಹೃದಯಘಾತ ಸೇರಿದಂತೆ ಮತ್ತಿತರ ಕಾಯಿಲೆಗಳು ಕಂಡುಬರುತ್ತಿವೆ. ಆದ್ದರಿಂದ ದಿನಾಲು ತಪ್ಪದೇ ನಸುಕಿನ ಜಾವ ನಡೆಯುವ ಅಭ್ಯಾಸವನ್ನು ಮಾಡಿಕೊಂಡರೆ ಸದೃಢ ಆರೋಗ್ಯದಿಂದರಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ‘ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಬುಧವಾರ ಜರುಗಿದ ‘ರಾಷ್ಟ್ರೀಯ ನಡಿಗೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಡಿಗೆಯಿಂದ ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತದೆ. ಶ್ವಾಸಕೋಶ, ಹೃದಯನಾಳಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆ ಪರಿಹರಿಸುತ್ತದೆ. ಹಾರ್ಮೋನ್‍ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. ನೋವು ಮುಕ್ತ ನರ, ಸ್ನಾಯು ನಮ್ಮದಾಗುತ್ತವೆ. ದೀರ್ಘಾಯುಷಿಯಾಗಲು ಸಾಧ್ಯ. ನಡಿಗೆ ಮಾಡುವಾಗ ಉಸಿರಾಟದತ್ತ ಚಿತ್ತವಿರಬೇಕು. ಮೋಬೈಲ್ ವೀಕ್ಷಣೆ ಮಾಡುತ್ತಾ ನಡಿಗೆ ಬೇಡ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಚಂದ್ರಕಲಾ ಮಠಪತಿ, ಚಂದಮ್ಮ ಮರಾಠಾ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ, ಸಿದ್ರಾಮ ಸೇರಿದಂತೆ ಇನ್ನಿತರರಿದ್ದರು.