ಸದಾಶಿವ ವರದಿ ಅನುಷ್ಠಾನ ವಿಳಂಬ : ಅರೆಬೆತ್ತಲೆ ಪ್ರತಿಭಟನೆ

ರಾಯಚೂರು.ಆ.೩- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಲು ವಿಳಂಬ ಧೋರಣೆ ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರ ನಡೆ ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಿಂದ ಬಸವೇಶ್ವರ ವೃತ್ತದ ವರೆಗೆ ಅರೆಬೆತ್ತಲೆ ಪ್ರತಿಭಟನಾ ರ?ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂವಿಧಾನದ ಆಶಯದಂತೆ ಸರ್ವರಿಗೂ ಸಮಾಬಾಳು,ಸಮಾಪಾಲು ಎಂಬ ಆಶಯದಂತೆ ಸರ್ವರಿಗೂ ಮೂಲಸೌಕರ್ಯ ಒದಗಿಸುವ ಜೊತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟ ಸುಧಾರಣೆಗೆ ಮಾದಿಗ ಸಮಾಜ ಹಾಗೂ ಉಪಜಾತಿಗಳಿಗೆ ಒಳಮೀಸಲಾತಿ ನೀಡಬೇಕಿದೆ. ೧೯೯೭ರ ಅಕ್ಟೋಬರ್ ೧೩ ರಿಂದ ಮಾದಿಗ ಸಮಾಜದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮಾದಿಗ ದಂಡೋರ ಸಮಿತಿ ರಚಿಸಿ ಹೋರಾಟ ಮಾಡುತ್ತಾ ಬಂದಿದೆ. ಇದರ ಪ್ರತಿಫಲವಾಗಿ ಆಂದ್ರಪ್ರದೇಶದ ನ್ಯಾಯಮೂರ್ತಿ ರಾಮಚಂದ್ರ ರಾಜ್ ಆಯೋಗ, ಕೇಂದ್ರ ಉಷ ಮಹೇರ್ ಆಯೋಗ, ತಮಿಳುನಾಡು ಜನಾರ್ಧನ ಆಯೋಗ, ಮಹಾರಾಷ್ಟ್ರ ಲಾಹೋಜಿ ಸಾಲ್ವೆ ಆಯೋಗ, ಉತ್ತರ ಪ್ರದೇಶದ ಹುಕ್ಕುಂ ಸಿಂಗ್ ಆಯೋಗ, ಪಂಜಾಬ್ ಗುರ್ನೋಸಾ ಸಿಂಗ್ ಆಯೋಗಗಳ ಪ್ರತಿ ರಾಜ್ಯದ ವರ್ಗೀಕರಣ ಪ್ರಸ್ತಾವನೆಯನ್ನು ಸಲ್ಲಿಸಿದರೂ ೯ ವರ್ಷ ಅಧಿಕಾಯದಲ್ಲಿರುವ ಬಿಜೆಪಿಯ ಕೇಂದ್ರ ಸರ್ಕಾರ ನಿರ್ಲಕ್ಷಾ ಮಾಡುತ್ತಾ ಬಂದಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಸದಾಶಿವ ಆಯೋಗ ವರದಿ ಸಲ್ಲಿಸಿ ೧೦ ವರ್ಷ ಕಳೆದರೂ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ ವರದಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ,ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ, ತಾಲ್ಲೂಕಾಧ್ಯಕ್ಷ ದುಳ್ಳಯ್ಯ, ಗೋವಿಂದ ಈಟೇಕರ್, ರಂಜಿತ್ ದಂಡೋರ, ಜಕ್ರಪ್ಪ ಹಂಚಿನಾಳ, ರವಿ ದೇವನಪಲ್ಲಿ ಇದ್ದರು.