ಸದಾಶಿವ ವರದಿಗೆ ವಿರೋಧ: ಮನವಿ ಪತ್ರ ಅಭಿಯಾನಕ್ಕೆ ನಿರ್ಧಾರ

ಕಲಬುರಗಿ,ನ.29: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಯಾವುದೇ ಕಾರಣಕ್ಕೂ ಸ್ವೀಕರಿಸದಂತೆ ಒತ್ತಾಯಿಸಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಮಹಾರಾಜ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತೀರಾ ಅವೈಜ್ಞಾನಿಕ ರೀತಿಯಲ್ಲಿ ಸಿದ್ದಪಡಿಸಿರುವ ಸದಾಶಿವ ಆಯೋಗದ ವರದಿಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಸಚಿವರಾದ ಕೆ.ಎಚ್.ಮುನಿಯಪ್ಪ ಹಾಗೂ ಡಾ.ಜಿ.ಪರಮೇಶ್ವರ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಸರಕಾರ ಈ ವರದಿ ಜಾರಿಗೆ ತಂದರೆ ಅದು ಮರಣ ಶಾಸನ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಸದಾಶಿವ ವರದಿ ಸ್ವೀಕರಿಸದಂತೆ ಈಗಾಗಲೇ ಬಂಜಾರ, ಭೋವಿ, ಕೊರಚ, ಕೊರಮ, ಶಿಳ್ಳೆಕ್ಯಾತ, ಹಂದಿ ಜೋಗಿ, ಸುಡುಗಾಡು ಸಿದ್ದ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸೇರಿದಂತೆ 99 ಸಮುದಾಯಗಳ ಮುಖಂಡರು, ರಾಜಕೀಯ ಪ್ರತಿನಿಧಿಗಳು, ಸಮುದಾಯಗಳ ಮುಖಂಡರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇಷ್ಟಾದರೂ ರಾಜ್ಯ ಸರಕಾರ ಈ ಎಲ್ಲ ಸಮುದಾಯಗಳ ವಿರೋಧ ಲೆಕ್ಕಿಸದೆ ವರದಿ ಸ್ವೀಕರಿಸಲು ಮುಂದಾಗಿರುವುದು ಖಂಡನೀಯ ಎಂದರು.
ಭೋವಿ ಸಮಾಜದ ಮುಖಂಡ ತಿಪ್ಪಣ್ಣ ಒಡೆಯರಾಜ, ಬಂಜಾರ ಸಮಾಜದ ಮುಖಂಡರಾದ ಕನಿರಾಮ ರಾಠೋಡ್, ಶಾಮರಾವ್ ಪವಾರ್, ಚಂದು ಜಾಧವ್, ಭೋವಿ ಸಮಾಜದ ಶ್ರೀಹರಿ ಜಾಧವ್, ವಿನೋದ ಚವ್ಹಾಣ, ಭೀಮಾಶಂಕರ ಭಂಕೂರ ಹಾಗೂ ಶ್ರೀಧರ ಚವ್ಹಾಣ ಇದ್ದರು.

ಶಾಸಕರ ನಿವಾಸದ ಎದುರು ಧರಣಿ
ಬರುವ ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಕುರಿತು ಚರ್ಚಿಸುವ ಪ್ರಯತ್ನ ನಡೆಸಿದರೆ ರಾಜ್ಯ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು. ಅಲ್ಲದೆ, ಆಯಾ ಕ್ಷೇತ್ರಗಳಲ್ಲಿರುವ ಶಾಸಕರ ನಿವಾಸಗಳ ಎದುರು ಧರಣಿ ನಡೆಸಲಾಗುವುದು ಎಂದು ಶ್ರೀ ಸರ್ದಾರ್ ಸೇವಾಲಾಲ್ ಮಹಾರಾಜ್ ತಿಳಿಸಿದರು.