ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಅರಬೆತ್ತಲೆ ಪ್ರತಿಭಟನೆ, ಸಿಎಂ ಮನೆ ಮುತ್ತಿಗೆ

ರಾಯಚೂರು,ಮಾ.೧೬- ನ್ಯಾಯಮೂರ್ತಿ ಎ. ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಾರ್ಚ್ ೨೦ ರಂದು ಬೆಂಗಳೂರಿನ ಆರ್. ಟಿ ನಗರದಿಂದ ಅರೆಬೆತ್ತಲೆ ಬೃಹತ್ ಮೆರವಣಿಗೆ ಮುಖಾಂತರ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕುತ್ತೇವೆ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಒಳಮೀಸಲಾತಿ ವರ್ಗೀಕರಣ ಜಾರಿಗಾಗಿ ಸುಮಾರು ೨೮ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರು ಕೂಡ ಯಾವ ಪಕ್ಷಗಳು ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಕ್ಯಾಂಪ್ ನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು.ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಆಯೋಗದ ವರದಿಯನ್ನು ಈಗಾಗಲೇ ಸರ್ವಪಕ್ಷಗಳ ಸಭೆ ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ ಹಾಗೂ ಬಿಜೆಪಿ ಸರಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡುವಲ್ಲಿ ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೆ ಯಾವುದೇ ರೀತಿ ಸ್ಪಂದನೆ ನೀಡದ ಹಿನ್ನಲೆ ಅರಬೆತ್ತಲೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು,ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ,ಸುರೇಶ ದುಗನೂರು,ದುಳ್ಳಯ್ಯ ಗುಂಜಳ್ಳಿ,ರವಿ ದೇವನಪಲ್ಲಿ, ಜಕ್ರಪ್ಪ ಹಂಚಿನಾಳ ಇದ್ದರು.