ಸದಾಶಿವ ಆಯೋಗ ವರದಿಗೆ ಸದಾ ಬೆಂಬಲ: ಪರಮೇಶ್ವರ್

ತುಮಕೂರು, ಮಾ. ೨೮- ಒಳಮೀಸಲಾತಿಗಾಗಿ ನ್ಯಾ. ಸದಾಶಿವ ಆಯೋಗ ರಚನೆ ಮಾಡಲು ಕುಮ್ಮಕ್ಕು ಕೊಟ್ಟವನು ನಾನು. ಎಸ್ಸಿ ಕಮಿಟಿಯನ್ನು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವನಾಗಿ ಮಾಡಿದವನು ನಾನು. ಅಂದಿನಿಂದಲೂ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸುತ್ತಲೇ ಬಂದಿದ್ದೇನೆ ವಿನಃ ವಿರೋಧಿಸುವ ವ್ಯಕ್ತಿ ನಾನಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಹೇಳಿದರು.
ನಗರಕ್ಕೆ ಸಮೀಪದ ಶಿಕ್ಷಣ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಜನಾಂಗದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯ್ತಿ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಾಶಿವ ಆಯೋಗದ ವರದಿ ಜಾರಿಗಾಗಿ ಸದಾ ನಿಮ್ಮ ಜತೆ ಇರುತ್ತೇನೆ. ಇದನ್ನು ತಕ್ಷಣ ಜಾರಿಗೆ ತರಲು ಸಂಸದರಾದ ಎ.ನಾರಾಯಣಸ್ವಾಮಿಯವರು ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಬೇಕು. ಅವರ ಜತೆ ನಾವು ಸದಾ ಸಿದ್ಧರಾಗಿ ಅವರ ಬೆನ್ನ ಹಿಂದೆ ಇರುತ್ತೇವೆ ಎಂದು ತಿಳಿಸಿದರು.
ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ದಲಿತರ ಅಭಿವೃದ್ಧಿಗಾಗಿ, ದಲಿತ ಕಾಲೋನಿಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಇಂದು ಶೇ.೧೦೦ಕ್ಕೆ ೪೦ ರಷ್ಟು ಮಾತ್ರ ತಲುಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತರ ಅಭಿವೃದ್ಧಿಗೆಂದೇ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಇಲಾಖೆಗಳು ಆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾಗಿವೆ ಎಂದರು.
ಇಂದು ಜಾತಿ ವಿಷ ಬೀಜದ ಮೇಲೆ ರಾಜಕಾರಣ ನಡೆಯುತ್ತಿದೆ. ಜಾತಿ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿವೆ. ಇದು ತೊಲಗಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲಿದೆ. ಚುನಾವಣೆ ಬಂದಾಗ ಮಾತ್ರ ನಾವು ಸಮಾಜ ಕಟ್ಟುತ್ತೇವೆ. ರಾಷ್ಟ್ರೀಯತೆ ಕಟ್ಟುತ್ತೇವೆ ಎಂದು ಹೇಳುವವರು ಹಣ ಕೊಟ್ಟು ಮತ ಪಡೆದು, ಜಾತಿ ಆಧಾರದಲ್ಲಿ ಚುನಾವಣೆಗಳನ್ನು ನಡೆಸುತ್ತಾರೆ. ಇದರಿಂದ ಸಮಾಜ ಹಾಗೂ ರಾಷ್ಟ್ರೀಯತೆ ಎಂಬುದು ಬರೀ ಪುಸ್ತಕದಲ್ಲೇ ಉಳಿದುಕೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಲ್. ಹನುಮಂತಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಕಲಾಶ್ರೀ ಡಾ.ಲಕ್ಷ್ಮಣದಾಸ್, ಜಿ.ಪಂ. ಸದಸ್ಯ ಕೆಂಚಮಾರಯ್ಯ, ನರಸೀಯಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ಮರಿಚನ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಡ ಮತ್ತು ಬಲ ಸಮುದಾಯಗಳ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಲಾಯಿತು.