ಸದಾಶಿವ ಆಯೋಗದ ವರದಿ ವಿರೋಧಿ ಹೇಳಿಕೆಗೆ ಖಂಡನೆ

ತಿಪಟೂರು, ಸೆ. ೨೫- ಸದಾಶಿವ ಆಯೋಗದ ವರದಿಗೆ ಒತ್ತಾಯಿಸಿರುವ ಮಾದಿಗ ಸಮುದಾಯದ ನಾಯಕರು ಹಾಗೂ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿಯರ ಬಗ್ಗೆ ಕಾಂಗ್ರೆಸ್ ಪಕ್ಷದ ಸದಸ್ಯ ಹಾಗೂ ನಗರಸಭಾ ಸದಸ್ಯ ಯೋಗೇಶ್ ರವರ ಹೇಳಿಕೆ ಬಾಲಿಶತನದಿಂದ ಕೂಡಿದ್ದು, ಅವಿವೇಕ ಅಜ್ಞಾನದ ಪ್ರತೀಕವಾಗಿದೆ ಎಂದು ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಆನಂದ್‌ಕುಮಾರ್ ಹೇಳಿದ್ದಾರೆ.
ನ್ಯಾ. ಎ.ಜೆ. ಸದಾಶಿವ ಆಯೋಗವು ಸಂವಿಧಾನದತ್ತವಾಗಿ ಸರ್ಕಾರ ರಚನೆ ಮಾಡಿದ ಸ್ವತಂತ್ರ ಆಯೋಗವಾಗಿದ್ದು, ಈ ಆಯೋಗವು ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಜನಾಂಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರದ ಮೀಸಲು ಸೌಲಭ್ಯಗಳನ್ನು ಪರಿಶಿಷ್ಟರಲ್ಲೆ ಸ್ಪೃಶ್ಯ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದ್ದು, ಪರಿಶಿಷ್ಟರಲ್ಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಅಸ್ಪೃಶ್ಯ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಜನಸಂಖ್ಯಾವಾರು ಒಳಮೀಸಲಾತಿಗಾಗಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ರಾಜ್ಯಾಧ್ಯಂತ ಹೋರಾಟ ನಡೆಯುತ್ತಿದೆ. ಆಯೋಗದ ವರದಿ ಬಗ್ಗೆ ಎಲ್ಲಾ ಪರಿಶಿಷ್ಟ ಜಾತಿ ಸಮುದಾಯಗಳ ಅಭಿಪ್ರಾಯಗಳನ್ನು ತಿಳಿದು ವರದಿ ಜಾರಿ ಮಾಡಲು ಸರ್ಕಾರದ ಹಂತದಲ್ಲಿ ಪ್ರಯತ್ನಿಸುತ್ತಿರುವ ಮಾದಿಗ ಸಮುದಾಯದ ನಾಯಕರು ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿಯವರ ವಿರುದ್ದ ಹಾಗೂ ಎ.ಜೆ. ಸದಾಶಿವ ಆಯೋಗದ ವರದಿಯ ವಿರುದ್ದ ಹೇಳಿಕೆ ನೀಡಿ ಪರಿಶಿಷ್ಟ ಜಾತಿಗಳಲ್ಲೆ ವೈಮನಸ್ಯ ಉಂಟು ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದವರೆಲ್ಲ ನ್ಯಾಯಾಧೀಶ ಎ.ಜೆ. ಸದಾಶಿವ ಆಯೋಗದ ವರದಿ ಬಗ್ಗೆ ಮಾತನಾಡುತ್ತಾರೆ. ಸದಾಶಿವ ಆಯೋಗದ ವರದಿ ಎಲ್ಲಿಯೂ ಸಹ ಬಹಿರಂಗಗೊಂಡಿಲ್ಲ. ಹೀಗಿರುವಾಗ ವರದಿ ಅವೈಜ್ಞಾನಿಕ ಎಂಬ ಹೇಳಿಕೆ ಅಜ್ಞಾನದಿಂದ ಕೂಡಿದೆ. ಸದಾಶಿವ ಆಯೋಗದ ವರದಿ ಬಗ್ಗೆ ಮಾತನಾಡುವ ಮುಂಚೆ ವರದಿಯಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದಿದ್ದಾರೆ.
ಸಂವಿಧಾನದತ್ತವಾಗಿ ರಚನೆಯಾದ ಆಯೋಗದ ವರದಿ ಹಾಗೂ ಕೇಂದ್ರ ಸಚಿವರ ವಿರುದ್ದ ಮಾತನಾಡುವ ಮುನ್ನ ತಮ್ಮ ಇತಿಮಿತಿಯನ್ನು ಅರಿತು ಮಾತನಾಡಬೇಕು. ನಗರಸಭಾ ಸದಸ್ಯನಾಗಿ ರಾಜ್ಯ, ರಾಷ್ಟ್ರದ ಬೆಳವಣಿಗೆಗಳ ಕುರಿತು ಹೇಳಿಕೆ ನೀಡುವ ಮೊದಲು ತಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಲಿ. ಅದನ್ನು ಬಿಟ್ಟು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಹಾಗೂ ಎ.ಜೆ. ಸದಾಶಿವ ಆಯೋಗದ ವರದಿ ಬಗ್ಗೆ ಅನಗತ್ಯವಾಗಿ ಹೇಳಿಕೆ ನೀಡಿ ಸಹೋದರ ಸಮುದಾಯಗಳಾದ ಹೊಲೆಯ, ಮಾದಿಗ ಹಾಗೂ ಭೋವಿ ಲಂಬಾಣಿ ಕೊರಚ ಕೊರಮ ಇತರೆ ಅಲೆಮಾರಿ ಸಮುದಾಯಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.