ಸದಾಶಿವ ಆಯೋಗದ ವರದಿ ಜಾರಿ ಹೇಳಿಕೆ ಹಿಂಪಡೆಯಲು ಸಚಿವ ಶ್ರೀರಾಮುಲುಗೆ ಒತ್ತಾಯ

ಬಳ್ಳಾರಿ. ಮಾ.24- ಏಕಪಕ್ಷೀಯವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಹುಂಬತನದ ಹೇಳಿಕೆ ನೀಡಿರುವ ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ವಿರೋಧಿ ಒಕ್ಕೂಟ ಒತ್ತಾಯಿಸಿದೆ.
ಇಂದು ಈ ಬಗ್ಗೆ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಮುಖಂಡರುಗಳು, ರಾಜ್ಯ ಸರ್ಕಾರ ಈವರೆಗೆ ಸದಾಶಿವ ಆಯೋಗದ ವರದಿ ಬಹಿರಂಗಪಡಿಸಿಲ್ಲ. ಅದರಲ್ಲಿ ಏನಿದೆ ಎಂದು ಯಾರಿಗೂ ತಿಳಿದಿಲ್ಲ . ಆದರೂ ಕೆಲ ಅಂಶಗಳು ಸೋರಿಕೆಯಾಗಿದ್ದು ಪರಿಶಿಷ್ಟಜಾತಿಯ ಎ‌ಡ ಸಮುದಾಯಕ್ಕೆ ಶೇಕಡ 6, ಬಲ ಸಮುದಾಯಕ್ಕೆ ಶೇಕಡ 5, ಬೋವಿ ಲಂಬಾಣಿ, ಕೊರಮ, ಕೊರಚ ಇವರಿಗೆ ಶೇಕಡ 3ರಷ್ಟು ಉಳಿದ ವರಿಗೆ ಶೇಕಡಾ 1ರಷ್ಟು ಮೀಸಲಾತಿ ಎನ್ನಲಾಗುತ್ತಿದೆ.
ಆಯೋಗದ ವರದಿ ಅವೈಜ್ಞಾನಿಕ ಮತ್ತು ಅಸಂವಿಧಾನಿಕದಿಂದ ಕೂಡಿದೆ. ಸಾರ್ವಜನಿಕವಾಗಿ ಚರ್ಚೆ ಮಾಡಿಲ್ಲ ಏಕಾಎಕಿ ಆಯೋಗದ ವರದಿ ಜಾರಿಗೆ ಉಪಸಮಿತಿ ರಚಿಸಲಿದೆ ಎಂದು ಸಚಿವರು ಹೇಳಿದ್ದಾರೆ, ಇದರಿಂದ ಇತರ ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗಲಿದೆ .
ನಿಮ್ಮ ನಿರ್ಧಾರ ಬದಲಿಸಿ ಎಂದು ಸದ್ಯದಲ್ಲೇ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಅದಕ್ಕೆ ಸ್ಪಂದಿಸದಿದ್ದರೆ ಅವರ ಹೇಳಿಕೆ ಹಿಂಪಡೆಯುವವರೆಗೆ ಅವರ ಮನೆ ಮುಂದೆ ಧರಣಿ ನಡೆಸುವ ಕುರಿತು ನಿರ್ಧರಸಲಿದೆ ಎಂದು ಹೇಳಿದರು.
ಆಯೋಗದ ವರದಿಯಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಹಾಗೂ ಇತರ ಸಮುದಾಯಗಳಿಗೆ ಅನ್ಯಾಯ ಮಾಡಿರುವ ಅಂಶಗಳು ದೃಡವಾಗಿ ಎದ್ದುಕಾಣುತ್ತಿವೆ. ಕೇವಲ ಒಂದು ಜಾತಿಯನ್ನು ಒಲೈಸಲು ಹೋಗಿ ಇತರ 99 ಜಾತಿಗಳಿಗೆ ಅನ್ಯಾಯ ಮಾಡಲು ಹೊರಟಿರುವ ನೀವು ಉದ್ವೇಗದಿಂದ ಈ ಹೇಳಿಕೆಯನ್ನು ನೀಡಿರಬಹುದು. ಸದಾಶಿವ ಆಯೋಗ ವರದಿಯ ಬಗ್ಗೆ ಸರಿಯಾದ ಮಾಹಿತಿ ತಿಳಿಯದೇ ಹುಂಬತನದ ಹೇಳಿಕೆ ನೀಡಿ ಸಮಾಜದಲ್ಲಿನ ಲಂಬಾಣಿ, ಭೋವಿ ಕೊರಮ ಮೊದಲಾದವರಿಗೆ ಅನ್ಯಾಯ ಸರಿಯಲ್ಲ.
ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಮಾಡುವುದಾಗಿ ಈ ಹಿಂದೆ ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೊಟ್ಟ ಭರವಸೆ ಈವರೆಗೆ ಈಡೇರಿಲ್ಲ ಇದಕ್ಕೇಕೆ ಹೀಗೆ ಅವಸರ ಎಂದರು.
ಬಳ್ಳಾರಿಯಲ್ಲಿ ತಾವು ಚುನಾವಣೆ ಸಮಯದಲ್ಲಿ ಎಲ್ಲಾ ತಾಂಡಗಳಿಗೆ ಬಂದು ಮತ ಕೇಳಿದಾಗ ಲಂಬಾಣಿಗರು ಬೇಕಿತ್ತು ನಿಮಗೆ ಭೋವಿಗಳು ಕೊರಚ ಕೊರಮರು ಮತ ಹಾಕಲು ನಿಮಗೆ ಬೇಕು, ಸದಾಶಿವ ಆಯೋಗದ ವರದಿಯ ಬಗ್ಗೆ ಹೇಳಿಕೆ ನೀಡುವಾಗ ನಮ್ಮ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಜನರ ಅಭಿಪ್ರಾಯವಿಲ್ಲದೇ, ಮನೆ ಮನೆ ಸರ್ವ ಇಲ್ಲದೆ, ಯಾವುದೋ ಒಂದು ಮೂಲೆಯಲ್ಲಿ ಕುಳಿತು‌ಮಾಡಿದ ವರದಿ ಬಗ್ಗೆ ಸರಿಯಾಗಿ ತಿಳಿಯಬೇಕು.
ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದ ಲಂಬಾಣಿಗರ ಸಮಸ್ಯೆಯನ್ನು ತಿಳಿದುಕೊಳ್ಳಿ, ಗುಳೆ ಸಮಸ್ಯೆಯನ್ನು ಹೋಗಲಾಡಿಸಿ, ಅದನ್ನು ಬಿಟ್ಟು ನಮಗೆ ಕಂಟಕವಾಗುವ ಅವೈಜ್ಞಾನಿಕ ನಾ. ಸದಾಶಿವ ಆಯೋಗದ ವರದಿಯ ಬಗ್ಗೆ ಮಾತನಾಡಿ ಎಂದರು.
ವರದಿಯಲ್ಲಿ ಕೇವಲ ಸ್ಪರ್ಶರು ಎಂಬ ಕಾರಣಕ್ಕೆ ನಮ್ಮ ಸಮುದಾಯಗಳನ್ನು ಕಡೆಗಣಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ವಾಸ್ತವವಾಗಿ ನಾವುಗಳು ಸ್ಪರ್ಶರು ಅಲ್ಲಾ ಸ್ವಾಮಿ, ನಮ್ಮನ್ನು ಸಮಾಜದಲ್ಲಿ ಅಸ್ಪೃಶ್ಯರಂತೆ ಕಂಡಿದ್ದಕ್ಕಾಗಿ ಇಂದು ನಾವು ಪ್ರತ್ಯಕವಾದ ತಾಂಡಗಳಲ್ಲಿ ಹಳ್ಳಿಗಳಲ್ಲಿ ಕೇರಿಗಳಲ್ಲಿ ವಾಸಿಸುತ್ತಿರುವುದು.
ಸ್ಪರ್ಶರಾಗಿದ್ದರೆ ತಾಂಡಗಳು, ಹಟ್ಟಿಗಳು, ಕೇರಿಗಳಲ್ಲಿ ಪ್ರತ್ಯೇಕವಾಗಿ ವಾಸಿಸುವ ಅವಶ್ಯಕತೆ ಇರುತ್ತಿರಲಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಗೋವಿಂದನಾಯ್ಕ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಭೋವಿ (ವಡ್ಡರ) ಸಂಘದ ಅಧ್ಯಕ್ಷ ವಿ. ಮಹೇಶ್ ಬಂಡಿಹಟ್ಟಿ, ಸಂತ ಸೇವಾಲಾಲ್ (ಬಂಜಾರ) ಸಂಘದ ಜಿಲ್ಲಾ ಅಧ್ಯಕ್ಷ ರಾಮು ನಾಯ್ಕ, ಬಳ್ಳಾರಿ ಜಿಲ್ಲಾ ಭೋವಿ (ವಡ್ಡರ) ಸಂಘದ ನಿರ್ದೇಶಕ ವಿ.ನಾಗರಾಜ್, ಗೋರ್ ಸೇನಾ ದ ಅಧ್ಯಕ್ಷ ಪಿ.ಗೋಪಿನಾಯ್ಕ ರವಿನಾಯ್ಕ, ಸೇತುನಾಯ್ಕ ಮೊದಲಾದವರು ಇದ್ದರು.