ಸದಾಶಿವ ಆಯೋಗದ ವರದಿ ಜಾರಿ ಮರಣ ಶಾಸನ, ಸಂವಿಧಾನ ವಿರೋಧಿ: ತಿಪ್ಪಣ್ಣ ಒಡೆಯರಾಜ್

ಕಲಬುರಗಿ,ಮಾ.26: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿದ್ದು ಮೂಲಕ ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯದವರಿಗೆ ಮರಣ ಶಾಸನವಾಗಿದೆ ಎಂದು ಮಾನ್ಯ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯ ವಿರುದ್ಧ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಒಡೆಯರಾಜ್ ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿಯವರಿಗೆ ಶೇಕಡಾ 15ರಷ್ಟು ಮೀಸಲಾತಿಯ ನಿರ್ಬಂಧ ಇರುವುದರಿಂದ ರಾಜ್ಯ ಸರ್ಕಾರಕ್ಕೆ ಮೀಸಲಾತಿ ಹೆಚ್ಚಿಸುವ ಹಾಗೂ ಕಡಿಮೆ ಮಾಡುವ ಯಾವುದೇ ಅಧಿಕಾರ ಇಲ್ಲ. ಆದಾಗ್ಯೂ, ರಾಜ್ಯ ಸರ್ಕಾರವು ಸಂವಿಧಾನ ವಿರೋಧಿ ಕೆಲಸವನ್ನು ಮಾಡಿದೆ ಎಂದು ದೂರಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಸಹೋದರ ಸಂಬಂಧಿಗಳಾದ 101 ಜಾತಿಗಳು ಪರಿಶಿಷ್ಟ ಜಾತಿಯಲ್ಲಿ ಸೇರಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಬಿಜೆಪಿ ಸರ್ಕಾರವು ಬಂಜಾರಾ, ಭೋವಿ, ಕೊರಚ, ಕೊರಮ ಸಮುದಾಯದವರಿಗೆ ತಿರಸ್ಕಾರ ಹಾಗೂ ಅನ್ಯಾಯ ಮಾಡಿದ್ದು, ಮೀಸಲಾತಿಯ ನೆಪದಲ್ಲಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ಎಡಗೈಯವರಿಗೆ ಶೇಕಡಾ 6ರಷ್ಟು ಮತ್ತು ಬಲಗೈಯವರಿಗೆ ಶೇಕಡಾ 5.5ರಷ್ಟು ಹಾಗೂ ಸ್ಪರ್ಶ ಎಂದು ಹೆಸರಿಸಿ ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇಕಡಾ 4.5ರಷ್ಟು ಮತ್ತು ಅಲೆಮಾರಿ ಜನಾಂಗದವರಿಗೆ ಶೇಕಡಾ 1ರಷ್ಟು ಮೀಸಲಾತಿಯನ್ನು ನಾಗಮೋಹನದಾಸ್ ಅವರ ವರದಿ ಆಧಾರವಾಗಿಟ್ಟುಕೊಂಡು ಒಂದು ಜಾತಿಯನ್ನು ಎಸ್‍ಸಿಗೆ ಸೇರ್ಪಡೆ ಮಾಡಿ 102 ಜಾತಿಗಳೆಂದು ಒಡೆದು ತುಂಡು, ತುಂಡಾಗಿ ಕತ್ತರಿಸಿ ಆಂತರಿಕ ಜಗಳ ಹಚ್ಚಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಎಡಗೈ ಕೋಮಿನವರ ಮತಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮಾಡಿದೆ. ಅದೇ ರೀತಿ ಇನ್ನಿತರ ಸಮುದಾಯಗಳು ಅಂದರೆ ಲಿಂಗಾಯತ, ಪಂಚಮಸಾಲಿಯವರಿಗೂ ಕೂಡ ಪ್ರತ್ಯೇಕ ಮೀಸಲಾತಿ ಕೊಡುವುದರ ಜೊತೆಗೆ ಹಿಂದುತ್ವವನ್ನು ಪ್ರತಿಪಾದಿಸಿ ಅವರ ಮತಗಳನ್ನು ಪಡೆಯಲು ಮತ್ತು ಅಲ್ಪಸಂಖ್ಯಾತರ ಮುಸ್ಲಿಂಮರ ಮೀಸಲಾತಿಯನ್ನು ತೆಗೆದುಹಾಕಿ ಆ ಸಮುದಾಯಗಳಿಗೆ ಅನ್ಯಾಯ ಎಸಗಿ ದುರುದ್ದೇಶ ಇಟ್ಟುಕೊಂಡು ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡಲು ಹೊರಟಿರುವ ಬಿಜೆಪಿ ಕೋಮುವಾದಿ ಸರ್ಕಾರದ ನಿರ್ಣಯವನ್ನು ವಿರೋಧಿಸುವುದಾಗಿ ಅವರು ಆಕ್ಷೇಪಿಸಿದರು.
ಬಿಜೆಪಿ ಸರ್ಕಾರದಲ್ಲಿರುವ ಮತ್ತು ಇನ್ನಿತರ ರಾಜಕೀಯ ಪಕ್ಷದಲ್ಲಿರುವ ಬಂಜಾರಾ, ಭೋವಿ, ಕೊರಚ, ಕೊರಮ ಸಮುದಾಯಗಳ ಶಾಸಕರು ಮತ್ತು ಸಂಸದರು ಈ ಕುರಿತು ಚಕಾರ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಹಾಗೂ ಸದಾಶಿವ ಆಯೋಗದ ವರದಿಯ ಸಮಿತಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿನ ಸಮಿತಿಗೆ ಬಂಜಾರಾ ಸಮಾಜದ ಪ್ರಭು ಚವ್ಹಾಣ್ ಅವರು ಸದಸ್ಯರಾಗಿದ್ದು, ಅವರೂ ಕೂಡ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ. ಹೀಗಾಗಿ ಅವರೂ ಸಹ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದ ಶಿಫಾರಸ್ಸು ಅವೈಜ್ಞಾನಿಕವಾಗಿದೆ. ಒಂದು ಮೀಸಲಾತಿಯನ್ನು ಹೆಚ್ಚಿಸಿದ್ದು, ಅದನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಯಾದ 371(ಜೆ) ವಿಧೇಯಕದ ರೀತಿಯಲ್ಲಿಯೇ ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕಿತ್ತು. ಅದನ್ನು ಮಾಡದೇ ಈಗ ಒಳ ಮೀಸಲಾತಿಯನ್ನೂ ಸಹ ಸಚಿವ ಸಂಪುಟ ಸಭೆಯಲ್ಲಿ ಜಾರಿಗೆ ತರಲು ನಿರ್ಣಯ ತೆಗೆದುಕೊಂಡಿದ್ದು ಸಹ ಸಂವಿಧಾನ ಬಾಹಿರವಾಗಿದೆ. ಕೂಡಲೇ ಅದನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗೆ ಹೆಚ್ಚಳ ಮಾಡಿರುವ ಮೀಸಲಾತಿಯನ್ನು ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕು. ಆನಂತರ ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಚರ್ಚಿಸಬೇಕು. ಆನಂತರ ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆದು ಕೇಂದ್ರಕ್ಕೆ ಕಳಿಸಬೇಕು. ಕೇಂದ್ರ ಸರ್ಕಾರವು ಅದನ್ನು ಅನುಮೋದನೆ ಮಾಡಬೇಕು. ಇಂತಹ ಸಂವಿಧಾನ ಬದ್ಧ ಕ್ರಮಗಳನ್ನು ಕೈಗೊಳ್ಳದೇ ಬಿಜೆಪಿ ಸರ್ಕಾರ ಕೇವಲ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಇಂತಹ ಏಕಪಕ್ಷೀಯ ನಿರ್ಣಯವನ್ನು ತರಾತುರಿಯಲ್ಲಿ ತಂದಿದೆ. ಕೂಡಲೇ ಅದನ್ನು ಹಿಂಪಡೆಯದೇ ಹೋದಲ್ಲಿ ಕಾನೂನು ಹೋರಾಟ ರೂಪಿಸುವುದಾಗಿ ತಿಪ್ಪಣ್ಣ ಒಡೆಯರಾಜ್ ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಬಿ. ನಾಯಕ್, ಮಲ್ಲಿಕಾರ್ಜುನ್ ಕುಸ್ತಿ, ಅನಿಲ್ ರಾಠೋಡ್, ಮುರಾಹರಿ ಮಹಾರಾಜರು, ವಿನೋದ್ ಚವ್ಹಾಣ್, ಬಾಬು ರಾಠೋಡ್, ಪಿ.ಜಿ. ರಾಠೋಡ್, ಹಣಮಂತರ್ ಬಿಳವಾರ್, ರವಿಕುಮಾರ್ ಚವ್ಹಾಣ್, ಶಿವರಾಜ್ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.