ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯ

ಮಾನ್ವಿ,ನ.೨೩- ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ನ.೨೮ ರಿಂದ ದಸಂಸ ಸಂಸ್ಥಾಪಕ ಪ್ರೋ.ಬಿ.ಕೃಷ್ಣಪ್ಪನವರ ಮೈತ್ರಿ ವನದಿಂದ ಪಾದಯಾತ್ರೆ ಪ್ರಾರಂಭವಾಗಿ ಡಿ.೧೧ ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ಗೆ ತಲುಪಲಿದೆ ಎಂದು ಎಂಆರ್‌ಎಚ್‌ಎಸ್ ತಾಲೂಕಾಧ್ಯಕ್ಷ ಯಲ್ಲಪ್ಪ ವಕೀಲ ಬಾದರದಿನ್ನಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಡಿ.೧೧ ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಸಾಮಾಜಿಕ ನ್ಯಾಯಕ್ಕಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಕೂಡಲೇ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವ ಮೂಲಕ ಶೋಷಿತ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ರಾಜಕೀಯ ಪ್ರಗತಿಗೆ ಸರ್ಕಾರಗಳು ಕಾರಣರಾಗಬೇಕೆಂದು ಆಗ್ರಹಿಸಿದರು.
ನ.೨೮ ರಿಂದ ನಡೆಯುವ ಪಾದಯಾತ್ರೆಯಲ್ಲಿ ಹೊಲೆಯ ಮಾದಿಗ ಸಮುದಾಯದ ಎಲ್ಲಾ ಮುಖಂಡರು, ಪ್ರಗತಿಪರ ಸಂಘಟಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೂಳ್ಳಬೇಕು. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆಗೆ ಹೊಲೆಯ ಮಾದಿಗ ಸಮುದಾಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ. ಒಗ್ಗಟ್ಟಿನಿಂದ ಹೋರಾಟವನ್ನು ಕೈಗೊಳ್ಳಲು ಮುಂದಾಗಬೇಕೆಂದು ಯಲ್ಲಪ್ಪ ವಕೀಲ ಬಾದರದಿನ್ನಿ ಕರೆ ನೀಡಿದರು.
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ವರದಿಯನ್ನು ಬಹಿರಂಗಪಡಿಸಬೇಕು, ಶೇ.೬ ರಷ್ಟು ಮೀಸಲಾತಿ ಸೌಲಭ್ಯ, ಎಲ್ಲಾ ರಾಜಕೀಯ ಪಕ್ಷಗಳು ಮಾದಿಗ ಸಮಾಜಕ್ಕೆ ೧೫ ಸ್ಥಾನಗಳನ್ನು ಕಲ್ಪಿಸಬೇಕು. ಪೌರಕಾರ್ಮಿಕರ, ವಾಹನ ಚಾಲಕರ ಖಾಯಂಗೊಳಿಸುವುದು ಸೇರಿದಂತೆ ಇನ್ನಿತರ ಹಕ್ಕೋತ್ತಾಯಗಳನ್ನು ಮಾಡಲಾಗುತ್ತದೆ ಎಂದರು.
ಈ ವೇಳೆ ದಲಿತ ಮುಖಂಡರಾದ ಪಿ.ರವಿಕುಮಾರ ವಕೀಲ, ಪ್ರಭುರಾಜ್ ಕೊಡ್ಲಿ, ಶಿವರಾಜ್ ಜಾನೇಕಲ್, ಬಸವರಾಜ ನಕ್ಕುಂದಿ, ಜಯಪ್ರಕಾಶ ಕೋನಾಪುರಪೇಟೆ, ಜೆ.ಹೆಚ್.ದೇವರಾಜ್, ಅಶೋಕ ನಿಲೋಗಲ್, ರಾಯಪ್ಪ ವಕೀಲ, ಹನುಮಂತ ಕೋಟೆ, ಲಕ್ಷ್ಮಣ್ ಜಾನೇಕಲ್, ಪ್ರವೀಣಕುಮಾರ ಕೋನಾಪುರಪೇಟೆ, ಪರಶುರಾಮ ಬಾಗಲವಾಡ, ಮಲ್ಲೇಶ ಜಗ್ಲಿ, ಶಂಕರ ಜಗ್ಲಿ, ಯಲ್ಲಪ್ಪ ಸೀಕಲ್, ರವಿಕುಮಾರ ಮದ್ಲಾಪುರು, ಗಣೇಶ ಸಂಗಾಪುರು, ಮರಿಸ್ವಾಮಿ ಅಮರಾವತಿ, ರಮೇಶ ನೀರಮಾನ್ವಿ, ವಿರೇಶ ಚೀಕಲಪರ್ವಿ ಸೇರಿದಂತೆ ಇನ್ನಿತರರಿದ್ದರು.