ಸದಾಶಿವ್ ಆಯೋಗದ ವರದಿ ಜಾರಿ ವಿರೋಧಿಸಿ ಎಲ್ಲ ಶಾಸಕರಿಗೆ ಮನವಿ ಪತ್ರ ಸಲ್ಲಿಸುವ ಅಭಿಯಾನ

ಕಲಬುರಗಿ,ನ.29: ನಿವೃತ್ತ ನ್ಯಾಯಾಧೀಶ ಎ. ಸದಾಶಿವ್ ಆಯೋಗದ ವರದಿಯನ್ನು ಜಾರಿ ಮಾಡದಂತೆ ಆಗ್ರಹಿಸಿ ರಾಜ್ಯದ ಎಲ್ಲ 224 ವಿಧಾನಸಭೆಯ ಸದಸ್ಯರಿಗೆ ಎಲ್ಲ ವಂಚಿತ ಸಮುದಾಯಗಳು ಸೇರಿಕೊಂಡು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಚಿತ್ರದುರ್ಗದ ಬಂಜಾರಾ ಗುರುಪೀಠದ ಸರ್ದಾರ್ ಸೇವಾಲಾಲ್ ಮಹಾರಾಜರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸೋದರ ಸಂಬಂಧಿ ಸಮಾಜಗಳವರು ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನ್ಯಾಯಮೂರ್ತಿ ಸದಾಶಿವ್ ಆಯೋಗವನ್ನು 2005ರಲ್ಲಿ ರಚಿಸಿದ್ದು, 2012ರಲ್ಲಿ ಡಿ.ವಿ. ಸದಾನಂದಗೌಡರ ಅವಧಿಯಲ್ಲಿ ವರದಿ ಸ್ವೀಕಾರವಾಗಿದೆ. ನಂತರದ ದಿನಗಳಲ್ಲಿ 2015ರಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚನೆಯಾಗಿದೆ. 2020ರ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ನಾಗಮೋಹನದಾಸ್ ಆಯೋಗದ ವರದಿಯನ್ನು ಜಾರಿಗೊಳಿಸಲು ಸುಗ್ರೀವಾಜ್ಞೆ ಹೊರಡಿಸಿ, ಪರಿಶಿಷ್ಟ ಜಾತಿಯ ಶೇಕಡಾ 15ರಿಂದ 17ರಷ್ಟು ಮತ್ತು ಪರಿಶಿಷ್ಟ ಪಂಗಡದ ಶೇಕಡಾ 3ರಿಂದ ಏಳರಂತೆ ಅನುಷ್ಠಾನ ಮಾಡುವ ಮುಖಾಂತರ ಸರ್ಕಾರ ಬಿಸಿತುಪ್ಪಕ್ಕೆ ಕೈ ಹಾಕಿ ತನ್ನ ಕೈಯನ್ನೇ ತಾನೇ ಸುಟ್ಟುಕೊಂಡಿರುವ ಉದಾಹರಣೆಯಿದೆ ಎಂದು ಅವರು ಹೇಳಿದರು.
ಅವೈಜ್ಞಾನಿಕವಾಗಿರುವ ಸದಾಶಿವ್ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರದಲ್ಲಿ ಇರುವ ಕೆಲವು ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಡಾ. ಜಿ. ಪರಮೇಶ್ವರ್ ಮತ್ತು ಇತರರು ಗುಂಪುಗಳನ್ನು ಕಟ್ಟಿಕೊಂಡು ಅನೇಕ ಸಭೆ, ಸಮಾರಂಭಗಳಲ್ಲಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತರುತ್ತೇವೆ ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದಾರೆ. ಆದ್ದರಿಂದ ವರದಿ ವಿರೋಧವಾಗಿ 99 ಸಮುದಾಯಗಳ ಮುಖಂಡರು, ರಾಜಕೀಯ ಪ್ರತಿನಿಧಿಗಳು, ಸಮುದಾಯಗಳ ಮುಖಂಡರು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಸೇರಿ ಭೋವಿ, ಬಂಜಾರಾ, ಕೊರಚ, ಕೊರಮ, ಸುಳಿಕ್ಯಾತ್, ಹಂದಿ ಜೋಗಿ, ಸುಡುಗಾಡು ಸಿದ್ಧ, ಅಲೆಮಾರಿ, ಅರೆ ಅಲೆಮಾರಿ ಮುಂತಾದ ಸಮುದಾಯಗಳಿಗೆ ಮರಣ ಶಾಸನವಾಗಲಿದೆ. ಹಾಗಾಗಿ ವರದಿಯ ವಿರುದ್ಧ ಎಲ್ಲ ಶಾಸಕರಿಗೆ ಮನವಿ ಸಲ್ಲಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಜಾರಾ ಸಮುದಾಯದ ಮುಖಂಡರಾದ ಕನಿರಾಮ್ ರಾಠೋಡ್, ಚಂದು ಜಾಧವ್, ವಿನೋದ್ ಚವ್ಹಾಣ್ ವಕೀಲರು, ಶಾಮರಾವ್ ಪವಾರ್, ಶ್ರೀಧರ್ ಚವ್ಹಾಣ್, ಭೋವಿ ಸಮಾಜದ ಮುಖಂಡರಾದ ತಿಪ್ಪಣ್ಣ ಒಡೆಯರಾಜ್, ಶ್ರೀಹರಿ ಜಾಧವ್, ಭೀಮಾಶಂಕರ್ ಭಂಕೂರ್ ಮುಂತಾದವರು ಉಪಸ್ಥಿತರಿದ್ದರು.