ಸದಸ್ಯರು ಸಮಗ್ರ ಮಾಹಿತಿ ತಿಳಿದಿರಬೇಕು: ಶಾಸಕ ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.10: ಸಹಕಾರ ಸಂಘದ ಸದಸ್ಯರಾದವರು ತಮ್ಮ ಸಂಘದ ಸಮಗ್ರ ಚಿತ್ರಣವನ್ನು ತಿಳಿದಿರಬೇಕಾದುದು ಸಹಕಾರ ತತ್ವದ ಧ್ಯೇಯವಾಗಿದೆ ಎಂದು ಶಾಸಕ ಹಾಗೂ ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ತಮ್ಮ ಸ್ವಗ್ರಾಮ ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ 2023-2024 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳು ದೇಶದ ಬೆನ್ನೆಲುಬಾಗಿದ್ದು ಗ್ರಾಮೀಣ ಪ್ರದೇಶದ ರೈತರ ಮತ್ತು ಸದಸ್ಯರುಗಳ ಆಶೋತ್ತರಗಳನ್ನು ಈಡೇರಿಸುತ್ತವೆ. ಸಹಕಾರ ಸಂಘದ ಸದ್ಯರಾದವರು ತಾವು ಪ್ರತಿನಿಧಿಸುವ ಸಂಘದ ಬಗ್ಗೆ ಕೂಲಂಕುಷವಾದ ಮಾಹಿತಿಗಳನ್ನು ಅರಿತಿರಬೇಕಾದುದು ಅತೀ ಅವಶ್ಯಕವಾಗಿದೆ. ಸರ್ವ ಸದಸ್ಯರು ನಿಮಗೆ ಜವಾಬ್ದಾರಿ ನೀಡಿದ ನಂತರ ಸಂಘಗಳ ಆಗುಹೋಗುಗಳ, ಸಮಸ್ಯೆಗಳ ಆಳ, ಅಗಲ, ಪರಿಹಾರಗಳು, ಸರ್ಕಾರದಿಂದ ಸಂಘಕ್ಕೆ ದೊರೆಯುವ ಸೌಲಭ್ಯಗಳು, ಸಂಘದ ಸದಸ್ಯರುಗಳಿಗೆ ವಾರ್ಷಿಕವಾಗಿ ಸಿಗುವ ಪ್ರತಿಫಲ ಮುಂತಾದುವುಗಳನ್ನು ತಿಳಿದಿರಬೇಕು. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಪ್ರತಿಯೊಬ್ಬರು ನಂದಿನಿ ಉತ್ಪನ್ನಗಳನ್ನು ಬಳಸಿದರೆ ಪರೋಕ್ಷವಾಗಿ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಬೆಲೆ ನೀಡಿ ರೈತರಿಂದ ಹಾಲು ಖರೀದಿ ಮಾಡಲಾಗುತ್ತಿದೆ. ರೈತರುಗಳು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಜೀವವಿಮೆ ಮಾಡಿಸಬೇಕು. ಹಾಗು ರೈತರಿಗಾಗಿ ರೈತ ಕಲ್ಯಾಣ ಟ್ರಸ್ಟ್ ಅಡಿಯಲ್ಲಿ ಒಂದು ಲಕ್ಷದ ವರೆಗೆ ಜೀವ ವಿಮೆ ಸೌಲಭ್ಯವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಾರ್ಷಿಕ ಮಹಾಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪಅಲ್ಲಿಬಾದಿ ಸಂಘದ ಆಯ್ಯವ್ಯಯ ಬಜೆಟ್ ಮಂಡಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಅನುರತಿ, ನಿರ್ದೇಶಕರಾದ ಹೆಚ್.ಎಸ್.ಮಹೇಶ್, ಹೆಚ್.ಕೆ.ಶಿವರಾಮು, ಬಸವೇಗೌಡ, ಅಹಮದ್ ಪಾಷ, ಲೊಕೇಶ, ವಿಶ್ವನಾಥ್, ದಿಲೀಪ್, ಛಾಯಾದೇವಿ, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರು ಹಾಜರಿದ್ದರು.