ಸದಸ್ಯರನ್ನು ಗೌರವದಿಂದ ಕಾಣಬೇಕು:ಶಾಸಕ ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.24: ಪಕ್ಷ ಯಾವುದೇ ಇರಲಿ ಚುನಾಯಿತ ಸದಸ್ಯರನ್ನು ಗೌರವದಿಂದ ಕಾಣಬೇಕು ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸೌಹಾರ್ದಯುತವಾಗಿ ಕೆಲಸ ಮಾಡುವ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಕೆಲಸ ಮಾಡುವಂತೆ ಶಾಸಕ ಹೆಚ್.ಟಿ.ಮಂಜು ತಾಕೀತು ಮಾಡಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯತಿ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಗತಿ ಪರಿಶೀಲನಾ ಸಭೆಗೆ ಬಹುತೇಕ ಪಿ.ಡಿ.ಓ ಗಳು ಯಾವುದೇ ಪೂರ್ವ ಸಿದ್ದತೆಯಿಲ್ಲದೆ ಆಗಮಿಸಿದ್ದರು. ಸಭೆಗೆ ನೀಡಿದ ಪ್ರಗತಿ ಮಾಹಿತಿಗೂ ಆಗಿರುವ ಪ್ರಗತಿ ಕಾಮಗಾರಿಗಳ ಮಾಹಿತಿಗೂ ತಾಳೆಯಾಗುತ್ತಿರಲಿಲ್ಲ. ಕೆಲವು ಕಡೆ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ ಪಿ.ಡಿ.ಓ ಗಳು ಪೂರ್ಣಗೊಂಡಿದೆ ಎಂದು ಸುಳ್ಳು ಮಾಹಿತಿಗಳನ್ನು ದಾಖಲಿಸಿದ್ದರು. ಪಿ.ಡಿ.ಓ ಗಳ ಕಾರ್ಯಲೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ನಾನು ತಳಮಟ್ಟದ ರಾಜಕಾರಣದಿಂದ ಬೆಳೆದು ಬಂದವನು. ಗ್ರಾಮ ಪಂಚಾಯತಿಯ ಪ್ರತಿಯೊಂದು ಕ್ರಿಯಾಯೋಜನೆಗಳ ಸಂಪೂರ್ಣ ಅರಿವು ನನಗಿದೆ. ತಪ್ಪು ಮಾಹಿತಿ ನೀಡಿ ನನ್ನನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಸ್ವಾಭಿಮಾನ ಮತ್ತು ಆತ್ಮ ಗೌರವವನ್ನು ಕಳೆದು ಕೊಂಡು ಶಾಸಕಗಿರಿ ಮಾಡುವ ಅಗತ್ಯತೆ ನನಗಿಲ್ಲ. ನಿಮ್ಮನ್ನು ವಿಶ್ವಾಸದಿಂದ ನೋಡುತ್ತೇನೆ. ಅದನ್ನು ದುರುಪಯೋಗ ಪಡಿಸಿಕೊಂಡರೆ ನಿಮ್ಮ ಬಗ್ಗೆ ನಾನು ಕಠಿಣನಾಗಬೇಕಾಗುತ್ತದೆ. ಪಿಡಿಓಗಳ ಕಾರ್ಯಲೋಪವನ್ನು ಪಟ್ಟಿ ಮಾಡಿ ತಪ್ಪು ಹುಡುಕುವುದು ದೊಡ್ಡ ವಿಚಾರವಲ್ಲ. ನೀವು ಸಮಾಜಕ್ಕೆ ಅಂಜಿ ನಡೆಯಬೇಕು. ಕರ್ತವ್ಯ ಲೋಪ ಎಸಗಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸದಿದ್ದರೆ ಅದು ಬಹುದೊಡ್ಡ ಅಪರಾಧ ಎಂದು ಎಚ್ಚರಿಸಿದರು.
ಸರ್ಕಾರ ಪ್ರಧಾನ ಮಂತ್ರಿ ವಸತಿ ಯೋಜನೆ, ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆಯಡಿ ತಾಲೂಕಿಗೆ 2445 ಮನೆಗಳನ್ನು ನೀಡಿದೆ. ತಾಲೂಕಿನ 34 ಗ್ರಾಮ ಪಂಚಾಯತಿಗಳಿಂದ ಒಟ್ಟು 775 ಮನೆಗಳನ್ನು ಮಾತ್ರ ನಿರ್ಮಿಸಿದ್ದು 840 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 830 ಮನೆಗಳ ನಿರ್ಮಾಣ ಕಾಮಗಾರಿ ಆರಂಭವೇ ಆಗಿಲ್ಲ. ಗ್ರಾಮೀಣ ಪ್ರದೇಶದ ಮನೆ ಮತ್ತು ನಿವೇಶನಗಳ ಇ-ಸ್ವತ್ತು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಅಗತ್ಯವಿರುವ ಕಡೆ ಸ್ಮಶಾನ ಜಾಗವನ್ನು ಗುರುತಿಸುವ ಕೆಲಸವನ್ನೂ ಕೆಲವು ಪಿ.ಡಿ.ಓಗಳು ಮಾಡಿಲ್ಲ. ನರೇಗಾ ಯೋಜನೆಯ ಕಾಮಗಾರಿಗಳಲ್ಲೂ ನಿರೀಕ್ಷಿತ ಗುರಿ ಸಾಧಿಸುವಲ್ಲಿ ತಾಲೂಕಿನ ಬಹುತೇಕ ಪಿ.ಡಿ.ಓ ಗಳು ವಿಫಲರಾಗಿದ್ದಾರೆ. ನಾನು ಸೋಕಿಗಾಗಿ ಇಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡುತ್ತಿಲ್ಲ. ಸಭೆಯ ಮಾಹಿತಿಯಿದ್ದರೂ ತಾಲೂಕಿನ ಸಾರಂಗಿ, ಗಂಜೀಗೆರೆ, ಸಂತೇಬಾಚಹಳ್ಳಿ, ಮುರುಕನಹಳ್ಳಿ ಗ್ರಾಮ ಪಂಚಾಯತಿ ಪಿ.ಡಿ.ಓಗಳು ಪ್ರಗತಿ ಮಾಹಿತಿಯನ್ನೆ ನೀಡದೆ ಕರ್ತವ್ಯದ ಬಗ್ಗೆ ತಾತ್ಸಾರ ಭಾವನೆ ಪ್ರದರ್ಶಿಸಿದ್ದಾರೆ. ಶಾಸಕರಿಗೆ ಮಾಹಿತಿ ನೀಡದಿದ್ದ ಮೇಲೆ ಜನ ಸಾಮಾನ್ಯರಿಗೆ ನೀವು ಹೇಗೆ ಸ್ಪಂಧಿಸುತ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಹೆಚ್.ಟಿ.ಮಂಜು ಕರ್ತವ್ಯ ಲೋಪ ಪ್ರದರ್ಶಿಸಿರುವ ಪಿ.ಡಿ.ಓ ಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಸಭೆಯಲ್ಲಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಕನಿಷ್ಠ ಮಾಹಿತಿಯೊಂದಿಗೆ ಸಭೆಗೆ ಹಾಜರಾಗದ ಪಿ.ಡಿ.ಓ ಗಳ ನಡೆ ಕೆಟ್ಟದ್ದು. ಇಂತಹ ಪಿ.ಡಿ.ಓ ಗಳಿಗೆ ನೋಟೀಸ್ ನೀಡಲಾಗುವುದೆಂದರು. ಜಿಲ್ಲೆಯಲ್ಲಿ ಇ-ಸ್ವತ್ತು ಆಂದೋಲನ ಮಾಡಲಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಇದುವರೆಗೂ ಒಂದೇ ಒಂದು ಗ್ರಾಮ ಪಂಚಾಯತಿಯಲ್ಲಿಯೂ ಇ-ಸ್ವತ್ತು ಆಂದೋಲನ ಆರಂಭಗೊಂಡಿಲ್ಲ. ದಿನಕ್ಕೆ 3-4 ರಂತೆ ತಿಂಗಳಿಗೆ 100 ಇ-ಸ್ವತ್ತು ಮಾಡಲೇಬೇಕು. ಮುಂದಿನ ಮೂರು ತಿಂಗಳಿನೊಳಗೆ ಸಂಪೂರ್ಣ ಇ-ಸ್ವತ್ತು ಗ್ರಾಮಗಳನ್ನು ನಿರ್ಮಿಸಬೇಕು. ದ್ರವ ತ್ಯಾಜ್ಯ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯತಿಗೆ 5 ಲಕ್ಷ ರೂ ಅನುದಾನ ಒದಗಿಸಲಾಗಿದೆ. ಇದರ ಬಳಕೆ ಮಾಡಿ ಸ್ವಚ್ಚ ಗ್ರಾಮಗಳನ್ನು ನಿರ್ಮಿಸಬೇಕು. ಇ-ಸ್ವತ್ತು ಮತ್ತು ಸ್ಥಳೀಯ ತೆರಿಗೆ ಸಂಗ್ರಹ ಸೇರಿದಂತೆ ಪ್ರತಿಯೊಂದು ಗ್ರಾ.ಪಂ ಪ್ರಗತಿಯ ಬಗ್ಗೆ ನನ್ನಲ್ಲಿ ಮಾಹಿತಿಯಿದ್ದು ಸರಿಯಾಗಿ ಕರ್ತವ್ಯ ನಿರ್ವಹಿಸದ ಪಿ.ಡಿ.ಓ ಗಳ ವಿರುದ್ದ ಕ್ರಮ ಜರುಗಿಸಲಾಗುವುದೆಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಸತೀಶ್ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಪಿ.ಡಿ.ಓಗಳು ಹಾಜರಿದ್ದರು