ಸದನದಲ್ಲಿ ವರ್ಗಾವಣೆ ಗದ್ದಲ

(ಸಂಜೆವಾಣಿ ಪ್ರತಿನಿಧಿಯಿಂದ)
ಅರ್ಹತೆಯಿಲ್ಲದ ಅಧಿಕಾರಿಗಳ ವರ್ಗಾವಣೆ ವಿಚಾರ ಕುರಿತಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಕಲಾಪಕ್ಕೆ ಅಡ್ಡಿಪಡಿಸಿದರು.

ಬೆಂಗಳೂರು,ಜು.೧೧:ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಚಾರ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ವೇದಿಕೆಯಾಯಿತು. ಅರ್ಹತೆ ಇಲ್ಲದ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿಂದು ಧರಣಿ ನಡೆಸಿದ್ದರಿಂದ ಕಲಾಪ ಕೆಲಕಾಲ ಮುಂದೂಡುವಂತಾಯಿತು.
ವಿಜಯಪುರ ಮಹಾನಗರ ಪಾಲಿಕೆಗೆ ಅರ್ಹತೆ ಇಲ್ಲದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಈಗ ವಿಜಯಪುರ ಮಹಾನಗರ ಪಾಲಿಕೆಗೆ ನೇಮಕ ಮಾಡಿರುವ ಅಧಿಕಾರಿಯನ್ನೇ ಮುಂದುವರೆಸುತ್ತೇವೆ. ಏನು ಬೇಕಾದರು ಮಾಡಿಕೊಳ್ಳಿ ಎಂದು ನೀಡಿದ ಹೇಳಿಕೆ ಬಿಜೆಪಿ ಸದಸ್ಯರನ್ನು ಕೆರಳುವಂತೆ ಮಾಡಿತು. ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಾಮಕಿ, ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು. ಆಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳುವಂತೆ ಬಿಜೆಪಿ ಸದಸ್ಯರ ಒತ್ತಾಯಕ್ಕೆ ಮಣಿಯಲಿಲ್ಲ. ಇದರಿಂದ ಕುಪಿತಗೊಂಡ ಬಿಜೆಪಿ ಸzಸ್ಯರು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಸದನದಲ್ಲಿ ಗದ್ದಲ-ಕೋಲಾಹಲವುಂಟಾಗಿದ್ದರಿಂದ ಸಭಾಧ್ಯಕ್ಷ ಯು.ಟಿ ಖಾದರ್ ಕಲಾಪವನ್ನು ೧೫ ನಿಮಿಷಗಳ ಕಾಲ ಮುಂದೂಡಿದರು.ನಮ್ಮ ಸರ್ಕಾರವಿದ್ದಾಗಲೂ ನಾವು ಯಾವುದೇ ವರ್ಗಾವಣೆ ಮಾಡಿರಲಿಲ್ಲ, ಸರ್ಕಾರ ನಿಯೋಜಿಸಿದ್ದ ಅಧಿಕಾರಿಗಳ ಜತೆ ಹೊಂದಿಕೊಂಡು ಕೆಲಸ ಮಾಡಿಸಿದ್ದೇನೆ, ತಾವು ವರ್ಗಾವಣೆ ದಂಧೆ ಮಾಡಿಲ್ಲ, ನೀವು ಅರ್ಹತೆ ಇಲ್ಲದ ಅಧಿಕಾರಿಯನ್ನು ನೇಮಿಸಲು ವ್ಯಾಪಾರ ಮಾಡಿದ್ದಿರಾ ಎಂದು ಕೆಣಕಿದರು.
ಯತ್ನಾಳ್ ಅವರ ವ್ಯಾಪಾರ ಎನ್ನುವ ಆರೋಪಕ್ಕೆ ತಿರುಗಿ ಬಿದ್ದ ಆಡಳಿತ ಪಕ್ಷದ ಸದಸ್ಯರು ವ್ಯಾಪಾರ ಮಾಡಲು ಸದನಕ್ಕೆ ಬಂದಿಲ್ಲ ಎಂದು ಏರು ದನಿಯಲ್ಲಿ ಹೇಳಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತನ ಚಕಮಕಿ ಉಂಟಾಯಿತು.ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಲ್ಲಿ ವ್ಯಾಪಾರ ಮಾಡಲು ಯಾರು ಬಂದಿಲ್ಲ, ಇತಿ-ಮಿತಿಯಲ್ಲಿ ನಡೆದುಕೊಳ್ಳಿ, ಶೂನ್ಯ ವೇಳೆ ವಿಷಯ ಪ್ರಸ್ತಾಪಕ್ಕೆ ಇದೆಯೇ ಹೊರತು ಚರ್ಚೆ ಮಾಡಲು ಅಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್‌ನ ಆಡಳಿತ ಪಕ್ಷದ ಶಾಸಕ ಶಿವಲಿಂಗೇಗೌಡ ಅವರು ನೀವೇನು ಹರಿಶ್ಚಂದ್ರರೇ ಎಂದು ಯತ್ನಾಳ್ ಅವರನ್ನು ಕೆಣಕಿ ವ್ಯಾಪಾರ ಮಾಡಲು ನೀವು ಬಂದಿದ್ದೀರಾ, ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಚರ್ಚೆ ಮಾಡದೆ ಸಚಿವರಿಂದ ಉತ್ತರ ಪಡೆದುಕೊಳ್ಳಿ ಎಂದರು.ಸದನ ಕೈ ಮೀರುತ್ತಿರುವ ವೇಳೆ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರು ಕ್ರಿಯಾಲೋಪವೆತ್ತಿ ಆಕ್ಷೇಪ ವ್ಯಕ್ತಪಡಿಸಿದರು. ಶೂನ್ಯ ವೇಳೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಚರ್ಚೆ ಮಾಡಲು ಅವಕಾಶವಿಲ್ಲ, ವ್ಯಾಪಾರ ಎನ್ನುವ ಪದ ಎತ್ತಿದ್ದಾರೆ. ಇದನ್ನು ಕಡತದಿಂದ ತೆಗೆದು ಹಾಕಿ ಎಂದು ಒತ್ತಾಯಿಸಿದರು.ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ರವರು ನನಗೆ ವ್ಯಾಪಾರ ವಹಿವಾಟು ನನಗೆ ಗೊತ್ತಿಲ್ಲ. ಅಂತಹ ದರ್ದು ನನಗಿಲ್ಲ, ೭ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯತ್ನಾಳ್, ವ್ಯಾಪಾರದ ಮಾತನಾಡುವುದು ಸರಿಯಲ್ಲ, ವಿಜಯಪುರ ನಗರ ಪಾಲಿಕೆ ಆಯುಕ್ತರಾಗಿ ವರ್ಗಾವಣೆಯಾಗಿರುವ ಬದ್ರುದ್ದೀನ್ ಸೌಜನ್ಯಕ್ಕಾದರೂ ನನ್ನ ಬಳಿ ಮಾತನಾಡಿಲ್ಲ ಎಂದಿದ್ದಾರೆ. ಮಾತನಾಡಿ ವ್ಯವಹಾರಕ್ಕೆ ಬಿಡಬೇಕಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ವಿವಿಧ ಅರ್ಹತೆ ಹೊಂದಿದ್ದ ಅಧಿಕಾರಿಯನ್ನು ನೇಮಕ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಲು ೨,೫೦೦ ಕೋಟಿ ಕೊಡಬೇಕು ಅಂದಿದ್ದವರು ನೀವು, ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಯತ್ನಾಳ್ ಅವರನ್ನು ಕೆಣಕಿದರು.ನಾನು ಮಾಡಿ ಆರೋಪವನ್ನು ಬೇಕಾದರೆ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಯತ್ನಾಳ್ ಸವಾಲು ಹಾಕಿದರು. ಮಧ್ಯ ಪ್ರವೇಶಿಸಿದ ಸಚಿವ ಬೈರತಿ ಸುರೇಶ್, ವಿಜಪುರ ಮಹಾನಗರ ಪಾಲಿಕೆಗೆ ನಿಯೋಜಿಸಿದ ಅಧಿಕಾರಿಯನ್ನು ಬದಲಾಯಿಸುವುದಿಲ್ಲ. ಏನು ಬೇಕಾದರು ಮಾಡಿಕೊಳ್ಳಿ ಎಂದು ಹೇಳಿದಾಗ ಪ್ರತಿಪಕ್ಷದ ಬಿಜೆಪಿ ಸದಸ್ಯರು ಸಚಿವರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು ಆಡಳಿತ ಪ್ರತಿಪಕ್ಷಗಳ ನಡುವೆ ಇದೇ ವಿಷಯವಾಗಿ ಗದ್ದಲ-ಕೋಲಾಹಲ ನಡೆದಾಗ ಸದನವನ್ನು ಸಭಾಧ್ಯಕ್ಷ ಯು.ಟಿ ಖಾದರ್ ಅವರು ಮುಂದೂಡಿದರು.